ವಿಎಸ್‌ಐಎಲ್ ಗಣಿಗಾರಿಕೆಗೆ ಸಹಮತ

Sandur Mines meeting
ಸಂಡೂರು ತಾಲೂಕಿನ ರಾಮಘಡದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಸರ ಅಲಿಕೆ ಸಭೆಯಲ್ಲಿ ಗ್ರಾಪಂ ಮಾಜಿ ಸದಸ್ಯೆ ಶಾಜಾಬಿ ಮಾತನಾಡಿದರು. ಎಡಿಸಿ ಮಹಮ್ಮದ್ ಜುಬೇರ್, ಹಿರಿಯ ಇಂಜಿನಿಯರ್ ಮುರಳೀಧರ, ಪರಿಸರ ಅಧಿಕಾರಿ ಪವನ್, ತಹಸೀಲ್ದಾರ್ ಅನಿಲ್ ಕುಮಾರ್, ಎಇಒ ಹನುಮಂತ ಕೊಪ್ಪದ್ ಇದ್ದರು.
Published on

ರಾಮಘಡದ ಪರಿಸರ ಆಲಿಕೆ ಸಭೆಯಲ್ಲಿ ಬಹುತೇಕರಿಂದ ಲಿಖಿತ-ಮೌಖಿಕ ಒಪ್ಪಿಗೆ

ಸಂಡೂರು: ರಾಮಘಡದಲ್ಲಿ ಶುಕ್ರವಾರ ಎಡಿಸಿ ಮಹಮ್ಮದ್ ಜುಬೇರ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಪರಿಸರ ಆಲಿಕೆ ಸಾರ್ವಜನಿಕ ಸಭೆಯಲ್ಲಿ ಪರ-ವಿರೋಧ ನಡುವೆ ಬಹುತೇಕರು ಭದ್ರಾವತಿಯ ವಿಶ್ವೇಶ್ವರಯ್ಯ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ (ವಿಎಸ್‌ಐಎಲ್)ಗೆ 60.07 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಒಪ್ಪಿಗೆ ಸೂಚಿಸಿದರು.

ಆರಂಭದಲ್ಲಿ ಎಡಿಸಿ ಜುಬೇರ್ ಅವರು, ಸಭೆಯಲ್ಲಿ ವೈಯಕ್ತಿಕ, ಸಾರ್ವಜನಿಕವಾಗಿಯೂ ಅರ್ಜಿ ಸಲ್ಲಿಸಬಹುದು ಅಥವಾ ಮೌಕಿಕವಾಗಿ ತಿಳಿಸಬಹುದು. ಇದನ್ನು ಹೊರತು ಪಡಿಸಿ ಬೇರೆ ವಿಷಯಗಳನ್ನು ಮಾತನಾಡುವಂತಿಲ್ಲ ಎಂದು ತಿಳಿಸಿದರು. ಕಂಪನಿಯ ಅಧಿಕಾರಿಯೊಬ್ಬರು ಮಾತನಾಡಿ, ಗಣಿಗಾರಿಕೆಯಿಂದ 43 ಜನರಿಗೆ ಕೆಲಸ ಸಿಗಲಿದೆ. ಅಲ್ಲದೆ ಪರೋಕ್ಷವಾಗಿ ಹೆಚ್ಚು ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ತಿಳಿಸಿದರು. ಇದಕ್ಕೆ ಕೆಲವರು ವಿರೋಧಿಸಿದರು. ರಾಮಘಡದ ಗ್ರಾಪಂ ಮಾಜಿ ಸದಸ್ಯೆ ಶಾಜಾಬಿ ಮಾತನಾಡಿ, ರಾಮಘಡಕ್ಕೆ ಸರಿಯಾದ ರಸ್ತೆ ಇಲ್ಲ. 15-20 ವರ್ಷಗಳಿಂದ ಇದನ್ನೇ ಕೇಳುತ್ತಾ ಬಂದಿದ್ದೇವೆ. ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಲ್ಲ. ಗಣಿಗಳಲ್ಲಿ ಬ್ಲಾಸ್ಟಿಂಗ್‌ನಿಂದ ಮನೆಗಳು ಬಿರುಕು ಬಿಟ್ಟಿವೆ ಎಂದು ದೂರಿದರು.

ಸುಶೀಲಾನಗರ ಷಣ್ಮುಖಪ್ಪ ಮಾತನಾಡಿ, 230 ಎಕರೆ ಭೂಮಿ ಖರಾಬು ಎಂದು ಮಾಡಿದ್ದೀರಿ. ಸರ್ವೇ ಸೆಟಲ್ಮೆಂಟ್ ಮಾಡಿದರೂ ಪಹಣಿಗಳಲ್ಲಿ ಬದಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶ್ರೀಶೈಲ ಆಲ್ದಳ್ಳಿ ಮಾತನಾಡಿ, 2019ರಲ್ಲಿ ವಿಎಸ್‌ಐಎಲ್ ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಮೈನ್ಸ್ ಇಲ್ಲವೆಂದು ಯಾರೂ ಮುಂದೆ ಬರಲಿಲ್ಲ. ದಟ್ಟವಾದ ಅರಣ್ಯದಲ್ಲಿ ಚಿರತೆ, ಕರಡಿಗಳು, ಕೊಂಡಗುರಿ, ಕಾಡುಹಂದಿ, ನವಿಲು ಜತೆಗೆ ನೂರಾರು ಬಗೆಯ ಪಕ್ಷಿಗಳಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ 29,400 ಗಿಡಗಳು ಹಾಳಾಗಲಿವೆ. 80 ಮೀಟರ್ ಆಳಕ್ಕೆ ಹೋದಾಗ ಭೂಕುಸಿತ ಸಂಭವಿಸಲಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಯಶವಂತನಗರ ಫೋಟೋಗ್ರಾಫರ್ ಕಾಶಪ್ಪ ಮಾತನಾಡಿ, ಗಣಿಕಂಪನಿಗಳು ಪರ್ಯಾಯವಾಗಿ ಅರಣ್ಯ ಬೆಳೆಸುತ್ತೇವೆಂದು ಹೇಳುತ್ತಾ ಬಂದಿದ್ದಾರೆ.

ತಾಲೂಕಿನಲ್ಲಿ ಎಲ್ಲೂ ಮರಗಿಡ ಬೆಳೆಸಿಲ್ಲ. ಸಿಎಸ್‌ಆರ್ ಹಣವನ್ನು ಪಿಎಂ, ಸಿಎಂಗಳಿಗೆ ಕೊಡುತ್ತಾರೆ. ಸಿಎಸ್‌ಆರ್ ಹಣ ಎಷ್ಟು ಖರ್ಚು ಮಾಡಿದ್ದೀರಿ ತೋರಿಸಿ. ಅದಿರುಗಾಗಿ 200-300 ಅಡಿಗಳಿಗೆ ಹೋಗುತ್ತಿದ್ದಾರೆ. ಮಾಧವ ಗಾಡ್ಗಿಲ್ ಅವರು ಹೇಳಿದಂತೆ ಸಂಡೂರು ವಯನಾಡು ಆಗುವ ದಿನಗಳು ದೂರವಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಪರವಾನಿಗೆ ಕೊಡಬೇಡಿ ಎಂದು ಹೇಳಿದರು. ಆದರೆ, ಉದ್ಯೋಗ, ಮೂಲಸೌಲಭ್ಯ ಸೇರಿ ಇತರ ಬೇಡಿಕೆ ಈಡೇರಿಸಬೇಕೆಂದು ಶೇ.80 ಜನರು ಲಿಖಿತ ಹಾಗೂ ಮೌಖಿಕವಾಗಿ ಒಪ್ಪಿಗೆ ನೀಡಿದರು.

ಎಡಿಸಿ ಮಹಮ್ಮದ್ ಜುಬೇರ್ ಮಾತನಾಡಿ, ಎಲ್ಲರ ಅಭಿಪ್ರಾಯಗಳನ್ನು ಮೇಲಧಿಕಾರಿಗಳಿಗೆ ಕಳಿಸಲಾಗುವುದು. ಮುಂದೆ ಸರ್ಕಾರವೇ ತೀಮಾರ್ನಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ಆರ್.ಪಕ್ಕೀರಪ್ಪ, ಮಹೇಶ್ ಗೌಡ, ಕುಮರನಾಯ್ಕ, ಎಂಎಲ್‌ಕೆ ನಾಯ್ಡು, ಟಿ.ಎಂ.ಶಿವಕುಮಾರ್, ಜಿ.ಕೆ.ನಾಗರಾಜ್, ಮೂಲೆಮನೆ ಈರಣ್ಣ, ದಳವಾಯಿ ಸೋಮಣ್ಣ, ಸಿದ್ದಾಪುರದ ಸಣ್ಣಲಿಂಗಪ್ಪ, ವಸಂತಕುಮಾರ್, ಜೆಬಿಟಿ ಬಸವರಾಜ, ಪಿಡಿಒ ಪ್ರಭುವನಗೌಡ, ಕಾಶಾನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net