

ಸಂಡೂರು: ಬೆಂಗಳೂರಿಗಷ್ಟೆ ಸೀಮಿತವಾಗಿದ್ದ ಕಸಾಪವನ್ನು ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ರಾಜ್ಯದಲ್ಲಿ ತಾಲೂಕು ಮಟ್ಟಕ್ಕೆ ವಿಸ್ತರಣೆ ಮಾಡಿದರು ಎಂದು ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ ಮಸೂತಿ ಹೇಳಿದರು.
ಇತ್ತೀಚೆಗೆ ನಿಧನರಾದ ಪ್ರೊ.ಜಿ.ಎಸ್ ಸಿದ್ದಲಿಂಗಯ್ಯ ಅವರಿಗೆ ಪಟ್ಟಣದ ಬಿಕೆಜಿ ಕಚೇರಿಯಲ್ಲಿ ಜ್ಞಾನ ನಮನ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಜಿ.ಎಸ್.ಸಿದ್ದಲಿಂಗಯ್ಯ 1989-1992ರವೆರೆಗೆ ಕಸಾಪ ಅಧ್ಯಕ್ಷರಾಗಿದ್ದರು. ಕವಿ, ವಿಮರ್ಶಕರು, ನಾಟಕಕಾರರು, ಸಂಪಾದಕರಾಗಿದ್ದ ಸಿದ್ದಲಿಂಗಯ್ಯ ಮೈಸೂರಲ್ಲಿ ಎಂಎ ಓದಿ ಚಿತ್ರದುರ್ಗದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು ಎಂದರು.
ಸಾಕಷ್ಟು ಕಥೆ, ಕಾವ್ಯ ಕೃತಿಗಳನ್ನು ಸಿದ್ದಲಿಂಗಯ್ಯ ರಚಿಸಿದ್ದಾರೆ. 1989ರಲ್ಲಿ ನಿವೃತ್ತರಾದ ನಂತರ ಕಸಾಪ ಅಧ್ಯಕ್ಷರಾದರು. ಕನ್ನಡ ನಿಘಂಟು ಪ್ರಕಟಣೆ ಕೈಗೆತ್ತಿಕೊಂಡರು. ಅವರ ಅವಧಿಯಲ್ಲೇ 1990ರಲ್ಲಿ ನಾನು ತಾಲೂಕು ಅಧ್ಯಕ್ಷನಾದೆ. ಬಳ್ಳಾರಿ ಜಿಲ್ಲಾ ಕಸಾಪ ಸಮ್ಮೇಳವನ್ನು ಸಂಡೂರಿನಲ್ಲಿ 1991ರ ಜ.11ಮತ್ತು 12ರಂದು ಅದ್ದೂರಿಯಾಗಿ ಆಚರಿಸಿದೆವು. ತುಮಕೂರಿನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಮುಂಬೈಯಲ್ಲಿ ಆಯೋಜಿಸಿದ್ದ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ವಚನ ಸಾಹಿತ್ಯದಲ್ಲಿ ಅಪಾರವಾದ ಕೆಲಸ ಮಾಡಿದ್ದರು ಎಂದು ಬಣ್ಣಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ಮಾತನಾಡಿ, ರಸಗಂಗೆ, ಉತ್ತರ, ಚಿತ್ರವಿಚಿತ್ರ ಮುಂತಾದ ಕವನ ಸಂಕಲನಗಳನ್ನು ಸಿದ್ದಲಿಂಗಯ್ಯ ರಚಿಸಿದ್ದರು. ಕವಿ ಲಕ್ಷ್ಮೀಶ, ಹೊಸಗನ್ನಡ ಕಾವ್ಯ, ಪಂಚಮುಖ ಚಾಮರಸ, ವಚನ ಸಾಹಿತ್ಯ ಒಂದು ಇಣುಕು ನೋಟ ವಿಮರ್ಶಾತ್ಮಕ ಗ್ರಂಥಗಳಾಗಿವೆ. ಬುದ್ದ, ಬಸವ ಮುಂತಾದವರ ಜೀವನ ಚರಿತ್ರೆ ರಚಿಸಿದ್ದರು. ಅಣ್ಣನ ನೂರೊಂದು ವಚನಗಳು, ಶತಾಬ್ದಿ ದೀಪ, ಸಂಪಾದನಾ ಗ್ರಂಥಗಳಾಗಿವೆ. ಬಸವ ಪ್ರಶಸ್ತಿ, ಕಸಾಪ ಪ್ರಶಸ್ತಿ, ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.