ಜೀವಸಂಕುಲದ ರಕ್ಷಣೆ ಅಗತ್ಯ

snd-1
ಸಂಡೂರಿನಲ್ಲಿ ಸಮಾಜಮುಖಿ ಬಳಗದಿಂದ ಆಯೋಜಿಸಿದ್ದ ‘ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ನನ್ನ ಸಂಕಲ್ಪ’ ಜಾಗೃತಿ ಕಾರ್ಯಕ್ರಮವನ್ನು ಧರ್ಮಗುರು ಮಾಲಾನಾ ಅತಾವುಲ್ಲಾ ಉದ್ಘಾಟಿಸಿದರು. ವಿರಕ್ತ ಮಠದ ಪ್ರಭು ಸ್ವಾಮೀಜಿ, ಫಾ.ಆಲ್ಬರ್ಟ್ ಡಿಸ್ಟು ಇತರರಿದ್ದರು.
Published on

ಸಂಡೂರು: ಸಂಡೂರು ಮತ್ತು ಇಲ್ಲಿನ ಅರಣ್ಯ ಸಂಪತ್ತು ಕಲ್ಯಾಣ ಕರ್ನಾಟದ ಆಕ್ಸಿಜನ್ ಬ್ಯಾಂಕ್ ಎಂದು ಉಪನ್ಯಾಸಕ ಸಮದ್ ಕೊಟ್ಟೂರು ಹೇಳಿದರು.

ಪಟ್ಟಣದ ವಿರಕ್ತ ಮಠದಲ್ಲಿ ಸಮಾಜಮುಖಿ ಬಳಗದಿಂದ ಭಾನುವಾರ ಆಯೋಜಿಸಿದ್ದ ‘ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ನನ್ನ ಸಂಕಲ್ಪ’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಷ್ಟು ಕಬ್ಬಿಣ ದಾಸ್ತಾನು ಇದೆಯೋ ಅಷ್ಟನ್ನೂಮನಬಂದಂತೆ ತೆಗೆಯಲಾಗುತ್ತಿದೆ. ಪ್ರಾಣಿ, ಪಕ್ಷಿ ಸೇರಿದಂತೆ ಜೀವ ಸಂಕುಲದ ರಕ್ಷಣೆಯಾಗಬೇಕು. ಅರಣ್ಯದಲ್ಲಿ ನೈಸರ್ಗಿಕ ಸಂಪತ್ತಿಗೆ ಲಗ್ಗೆ ಇಟ್ಟ ಕಾರಣ ಕರಡಿ, ಚಿರತೆಗಳು ಸೇರಿದಂತೆ ಕಾಡು ಪ್ರಾಣಿಗಳು ನಾಡಿನೆಡೆಗೆ ಬರುತ್ತಿವೆ ಎಂದರು.

ಡಾ.ಅರವಿಂದ ಪಾಟೀಲ್ ಮಾತನಾಡಿ, ಪ್ಲಾಸ್ಟಿಕ್ ಬಳಕೆ ದೊಡ್ಡ ಶಾಪವಾಗಿ ಪರಿಣಮಿಸುತ್ತಿದೆ. ಪ್ಲಾಸ್ಟಿಕ್ ರಾಸಾಯನಿಕಗಳ ಬಳಕೆಯಿಂದ ಅನೇಕ ರೋಗಗಳು ಬರುತ್ತಿವೆ. ಪ್ಲಾಸ್ಟಿಕ್ ಬಾಟಲ್‌ಗಳನ್ನು ನಿರಂತರವಾಗಿ ಬಳಸುತ್ತಿದ್ದೇವೆ.

ಮೈಕ್ರೋ ಪ್ಲಾಸ್ಟಿಕ್ ರಾಸಾಯನಿಕಗಳಿಂದ ಮಹಿಳೆಯರಲ್ಲಿ ಬಂಜೆತನ ಹೆಚ್ಚುತ್ತಿದೆ. ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ವಿರಕ್ತ ಮಠದ ಪ್ರಭು ಸ್ವಾಮೀಜಿ ಮಾತನಾಡಿ, ಇಂದು ಎಲ್ಲವೂ ಪ್ಲಾಸ್ಟಿಕ್‌ಮಯವಾಗಿದೆ. ಅಮೆರಿಕದಲ್ಲಿದ್ದ 50 ವರ್ಷದ ಗ್ರೀಸ್ ವ್ಯಕ್ತಿಯ ಕಾಯಿಲೆ ಕಂಡು ವೈದ್ಯರು ಆರು ತಿಂಗಳಷ್ಟೇ ಬದುಕುತ್ತೀಯ, ಏನೇನು ತಿನ್ನುವ ಆಸೆ ಇದೇಯೋ ತಿಂದು ಬಿಡು ಎನ್ನುತ್ತಾರೆ.

ಆಗ ವ್ಯಕ್ತಿಯು ನನ್ನ ತಂದೆ-ತಾಯಿ ಬಳಿ ಹೋಗಿ ಸಾಯುತ್ತೇನೆಂದು ಗ್ರೀಸ್ ದೇಶಕ್ಕೆ ಬರುತ್ತಾನೆ. ಅಲ್ಲಿನ ಪರಿಸರದಲ್ಲಿ ಆತ 108 ವರ್ಷ ಬದುಕುತ್ತಾನೆ. ಅದು ಪರಿಸರಕ್ಕೆ ಇರುವ ತಾಕತ್ತು ಎಂದರು.

ಸಂಡೂರಿನ ಕ್ರಿಸ್ತ ಜ್ಯೋತಿ ಫಾ.ಆಲ್ಬರ್ಟ್ ಡಿಸ್ಟು, ಬಿಲಾಲ್ ಮಸೀದಿಯ ಧರ್ಮಗುರು ಮಾಲಾನಾ ಅತಾವುಲ್ಲಾ, ವಕೀಲ ಟಿ.ಎಂ.ಶಿವಕುಮಾರ್ ಮಾತನಾಡಿದರು.

ಹಿರಿಯ ಪತ್ರಕರ್ತ ಚಂದ್ರಕಾಂತ್ ವಡ್ಡು ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ನನ್ನ ಸಂಕಲ್ಪ ಎಂದು ಬೋಧಿಸಿದರು. ಈ ವೇಳೆ ಬಟ್ಟೆಯ ಕೈಚೀಲಗಳನ್ನು ಹಂಚಲಾಯಿತು. ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಶಿಕ್ಷಕ ಲಾಲ್ ಹುಸೇನ್ ಕಂದಗಲ್, ಪ್ರಮುಖರಾದ ಉಜ್ಜಪ್ಪ, ಎ.ಜಿ.ಶ್ರೀಶೈಲ, ಮೂಲಿಮನೆ ಈರಣ್ಣ, ಎಂಎಲ್‌ಕೆ ನಾಯ್ಡು, ಬಸವರಾಜ ಮಸೂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net