

ಸಂಡೂರು: ಪುರಸಭೆಗೆ ನೀರು ಸರಬರಾಜು ಮಾಡಿಕೊಳ್ಳಲು ಎನ್‌ಎಂಡಿಸಿ ವಿದ್ಯುತ್ ವಿತರಣಾ ಘಟಕದಿಂದ ನಾರಿಹಳ್ಳ ಜಲಾಶಯದ ಬಳಿ ಪಂಪ್ ಹೌಸ್‌ಗೆ 38 ಲಕ್ಷ ರೂ.ಗಳಲ್ಲಿ 24*7 ಕರೆಂಟ್ ಕೊಡಲು ಅನುಮೋದನೆಗೆ ಇಲ್ಲಿನ ಕೆ.ಎಸ್.ವೀರಭದ್ರಪ್ಪ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಪ್ಪಿಗೆ ನೀಡಿದರು.
ಪೌರಕಾರ್ಮಿಕರು, ದಿನಗೂಲಿಗಳ ಸಂಬಳವನ್ನು 5-6 ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಅಲ್ಲದೆ ಪುರಸಭೆಯ ಕೆಲ ಅಧಿಕಾರಿಗಳು ಶೇ.10 ಕಮಿಷನ್ ಪಡೆಯುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸದಸ್ಯ ಕೆ.ಹರೀಶ್ ಒತ್ತಾಯಿಸಿದರು.
ಪುರಸಭೆಯ ಅಧಿಕಾರಿಗಳು ಶೇ.10 ಕಮಿಷನ್ ಪಡೆದಿಲ್ಲ. ಭ್ರಷ್ಟಾಚಾರಕ್ಕೆ ಪುರಸಭೆಯಲ್ಲಿ ಅವಕಾಶವಿಲ್ಲ. ನೌಕರರ ಪ್ರತಿ ತಿಂಗಳ ವೇತನ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಕೆ.ಜಯಣ್ಣ ಸಭೆಗೆ ತಿಳಿಸಿದರು.
ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ವೇತನ ಮಂಜೂರು ಮಾಡಲೂ ಕಮಿಷನ್ ಕೇಳುವ ಅಧಿಕಾರಿಗಳ ವಿರುದ್ಧ ಸದಸ್ಯರು ಮತ್ತು ನೌಕರರು ತಮ್ಮ ಗಮನಕ್ಕೆ ತರಬೇಕು. ಅಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಶಿಫಾರಸ್ಸಿಗೆ ಕಳುಹಿಸಿ ಕೊಡಲಾಗುವುದುದೆಂದರು.
ಸದಸ್ಯ ಎಚ್.ಎಲ್.ಶಿವಕುಮಾರ್, 15ನೇ ಹಣಕಾಸಿನ ಕೆಯುಡಬ್ಲುೃಎಸ್‌ಡಿಬಿ ಬಳ್ಳಾರಿಯವರಿಗೆ ಅಮೃತ 2.0 ಯೋಜನೆಯ ಕಾಮಗಾರಿಗೆ ವಂತಿಗೆ ಹಣ 80.40 ಲಕ್ಷ ರೂ. ಪಾವತಿಸಬೇಕಾಗಿದೆ. ಸದಸ್ಯರಿಗೆ ಗಮನಕ್ಕೆ ತರದೆ ಕಾಮಗಾರಿ ನಡೆಸಲು ಅನುಮತಿ ನೀಡಿರುವುದು ಸರಿಯಿಲ್ಲ. ಪಟ್ಟಣದ ಸುಸಜ್ಜಿತ ರಸ್ತೆಗಳನ್ನು ಅಗೆದು ಗುಂಡಿಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ. ಕೂಡಲೇ ಗುತ್ತಿಗೆದಾರರನ್ನು ಕರೆದು ವಿಚಾರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್ ದನಿಗೂಡಿಸಿ, ಕೂಡಲೇ ಗುತ್ತಿಗೆದಾರರನ್ನು ಕರೆದು ಸಭೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಪಟ್ಟಣದಲ್ಲಿ ಖಾಲಿ ನಿವೇಶನಗಳಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿ ಸೊಳ್ಳೆ, ನಾಯಿ, ಹಂದಿಗಳ ಹಾವಳಿ ಹೆಚ್ಚಾಗಿದೆ. ವಿವಿಧ ರೋಗಗಳಿಗೆ ತುತ್ತಾಗುವಂತಾಗಿದೆ. ಖಾಲಿ ನಿವೇಶನ ಮಾಲೀಕರಿಗೆ ತುರ್ತಾಗಿ ನೋಟಿಸ್ ನೀಡಿ, ಸ್ವಚ್ಛತೆ ಕಾಪಾಡಲು ಸೂಚಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಪುರಸಭೆಯ ಕಾಯಂ ನೌಕರರಿಗೆ ಕೊರತೆಯಾಗಿರುವ ವೇತನಾನುದಾನ 67 ಲಕ್ಷ ರೂ. ಹಣವನ್ನು 15ನೇ ಹಣಕಾಸಿನಡಿ ಬಳಕೆ ಮಾಡುವುದು ಬಿಟ್ಟು ಎಸ್‌ಎಪ್‌ಸಿ ಮುಕ್ತನಿಧಿ ಅನುದಾನ ಬಳಸಿಕೊಳ್ಳಬೇಕು ಎಂದು ಸದಸ್ಯರಾದ ಕೆ.ವಿ.ಸುರೇಶ್, ವಿರೇಶ್ ಸಿಂಧೆ, ಸಂತೋಷ್ ಜಾಧವ್ ಒತ್ತಾಯಿಸಿದರು.
ಉಪಾಧ್ಯಕ್ಷೆ ಎಂ.ಸಿ.ಲತಾ ಉಜ್ಜಪ್ಪ, ಕಚೇರಿ ವ್ಯವಸ್ಥಾಪಕ ಬಾಸ್ಕರ್, ಸಮುದಾಯ ಅಭಿವೃದ್ದಿ ಅಧಿಕಾರಿ ಎಚ್.ಪ್ರಭುರಾಜ್ ಮುಂತಾದವರಿದ್ದರು.