

ಸಂಡೂರು: ತಾಲೂಕಿನ 580ಕಿ.ಮೀ ರಸ್ತೆಯಲ್ಲಿ 550 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು ವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕ ಈ ತುಕಾರಾಮ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಸಂಡೂರು ತಾಲೂಕು ಗಣಿ ಅದಿರು ಸಾಗಣೆ ಗುತ್ತಿಗೆದಾರರ ಸಂಘ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ವೈಜ್ಞಾನಿಕ ರಸ್ತೆಗಳ ನಿರ್ಮಾಣದಿಂದಾಗಿ ಇಂದು ಲಾರಿ ಮಾಲೀಕರಿಗೆ ಸಾಕಷ್ಟು ಅನುಕೂಲವಾಗಿದೆ. ಶಾಸಕನಾಗುವ ಮೊದಲು ನಾನೂ ಇದೇ ಗಣಿಗಾರಿಕೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಲಾರಿ ಮಾಲೀಕರು ಮತ್ತು ಅದಿರು ಸಾಗಣೆದಾರರ ಸಮಸ್ಯೆಗಳು ಅರ್ಥವಾಗುತ್ತವೆ ಎಂದರು.
2014ರಲ್ಲಿ ಸಿಎಸ್‌ಆರ್ ಕಾನೂನು ಬಂದ ಬಳಿಕ ಸ್ಥಳೀಯ ಬಿಕೆಜಿ, ಸ್ಮಯೋರ್, ಜಿಂದಾಲ್ ಕಂಪನಿಗಳೊಡನೆ ಮಾತುಕತೆ ನಡೆಸಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಕೋರಲಾಗಿತ್ತು. ರಸ್ತೆ ಅಭಿವೃದ್ಧಿಗೆ ಕಂಪನಿಗಳೂ ಕೂಡಾ ಕೈ ಜೋಡಿಸಿವೆ ಎಂದು ನೆನೆದರು. ಹಿಂದೆ ಮೂರು ಲಾರಿಗಳಿದ್ದವರು ಇಂದು 30 ಲಾರಿಗಳ ಮಾಲೀಕರಾಗುವುದರಿಂದ ಜನತೆಗೆ ನ್ಯಾಯ ಸಿಗದು. ಯೂನಿಯನ್ ಕಡೆಯಿಂದ ಲಾಭ ನಷ್ಟದ ಜೊತೆಗೆ ಸಾಮಾಜಿಕ ಜವಾಬ್ದಾರಿ ಹೊತ್ತುಕೊಂಡು ಆರೋಗ್ಯ ಕ್ಯಾಂಪ್‌ಗಳು, ಡ್ರೈವರ್ ಮತ್ತು ಕ್ಲೀನರ್‌ಗಳಿಗೆ ತರಬೇತಿ ಕೊಡಿಸುವುದು ಇತ್ಯಾದಿ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದರು.
ಗಣಿ ಅದಿರು ಸಾಗಣೆ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷ ಬಿ.ಜಯಣ್ಣ ಮಾತನಾಡಿ, ಹೊಸಪೇಟೆ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಕೆಲ ಕಾರ್ಖಾನೆಗಳ ಸ್ಥಾಪನೆಗೆ ಮೂಲ ಸಂಡೂರಿನ ಅದಿರು ನಿಕ್ಷೇಪಗಳೇ ಕಾರಣ. ಖನಿಜ ಸಂಪತ್ತು ನಮ್ಮದೇ ಆದರೂ ನಮ್ಮವರಿಗೆ ದುಡಿಮೆ ಇಲ್ಲದಂತಾಗಿದೆ. ನಮಗೆ ಲಕ್ಷಾಂತರ ಸಂಪಾದನೆ ಮಾಡಲು ಅಲ್ಲ ಅನ್ನ, ಆರೋಗ್ಯ ಮೂಲ ಅವಶ್ಯಕತೆಗಳ ನೀಗಲು ಮತ್ತು ಜೀವಿಸಲು ಟ್ರಾನ್ಸ್‌ಪೋರ್ಟ್ ನೀಡಿ. ತಾಲೂಕಿನಲ್ಲಿ ಸಾಕಷ್ಟು ಸಾಗಣೆದಾರರಿದ್ದು ಪೂರ್ಣ ಪ್ರಮಾಣದಲ್ಲಿ ಟ್ರಾನ್ಸ್‌ಪೋರ್ಟ್ ಕೊಡುತ್ತಿಲ್ಲ ಎಂದು ದೂರಿದರು.
ಸ್ಥಳೀಯರು, ಭೂಮಿ ಕಳೆದುಕೊಂಡವರು ಲಾರಿಗಳ ಸಂಚಾರ ತಡೆದು ಪ್ರಶ್ನಿಸಿದರೆ ಪ್ರಭಾವ ಬಳಸಿ ಪೊಲೀಸರ ಮೂಲಕ ಹೆದುರಿಸುತ್ತಿದ್ದಾರೆ. ಇಂತಹ ಸಂದರ್ಭ ಶಾಸಕರು ನಮ್ಮೊಂದಿರಬೇಕು ಜತೆಗೆ ಅಧಿಕಾರಿಗಳು ಹಾಗೂ ಕಾರ್ಖಾನೆಗಳವರನ್ನು ಕರೆದು ಸಭೆ ನಡೆಸಿ ತಿಳಿಹೇಳಬೇಕೆಂದು ಕೋರಿದರು.
ಸಂಘದ ಗೌರವಾಧ್ಯಕ್ಷ ಚಿತ್ರಿಕಿ ಸತೀಶ್ ಹಾಗೂ ಸಂಡೂರು ವಿರಕ್ತ ಮಠದ ಶ್ರೀಪ್ರಭುಸ್ವಾಮೀಜಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಅನಿಲ್ ನಿಕ್ಕಂ, ತಾಲೂಕು ಅದಿರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜೆ.ಬಾಬುನಾಯ್ಕ, ತಾಲೂಕು ಸಂಘದ ಉಪಾಧ್ಯಕ್ಷ ವಾಮದೇವ, ಪ್ರಧಾನ ಕಾರ್ಯದರ್ಶಿ ರಮೇಶ್‌ಗಡಾದ್, ಗೌರವಾಧ್ಯಕ್ಷ ಎ.ಪಂಪಾಪತಿ, ಮುಖಂಡರಾದ ಡಿ.ಕೃಷ್ಣಪ್ಪ, ವಸಂತ್‌ಕುಮಾರ್, ಜೆಬಿಟಿ ಬಸವರಾಜ್, ಕಾಳಿಂಗೇರಿ ಮಲ್ಲಿಕಾರ್ಜುನ, ನಂದಿಹಳ್ಳಿ ಹನುಮೇಶ್, ಮಂಜುನಾಥ, ಭುಜಂಗನಗರ ಬಿ.ಜಿ.ಸಿದ್ದೇಶ್, ಓಂಕಾರ್‌ಗೌಡ, ಶ್ರೀನಿವಾಸ್, ವದ್ದಟ್ಟಿ ಅಂಬರೀಷ, ಎನ್.ಪಕ್ಕೀರಪ್ಪ ಇತರರಿದ್ದರು.
ತಬಲಾ ಕುಮಾರಸ್ವಾಮಿ ಮತ್ತು ತಂಡದವರು ಪ್ರಾರ್ಥಿಸಿದರು.