

ಸಂಡೂರು: ಜನರಿಗೆ ಸಮರ್ಪಕವಾಗಿ ಮಾಹಿತಿ ನೀಡದೆ ಹಾಗೂ ಅಧಿಕಾರಿಗಳು ಹಾಜರಾಗದಿದ್ದರೆ ಸಭೆಯನ್ನು ಏಕೆ ನಡೆಸಬೇಕು ಎಂದು ಲೋಕಾಯುಕ್ತ ಸಿಪಿಐ ನಾಗರೆಡ್ಡಿ ಪ್ರಶ್ನಿಸಿದರು.
ಇಲ್ಲಿನ ತಹಸಿಲ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು, ಗೈರಾದ ಅಧಿಕಾರಿಗಳ ಹೆಸರು ಪಟ್ಟಿ ಮಾಡಿಕೊಳ್ಳಲಾಗುವುದು. ಜನರು , ಅಧಿಕಾರಿಗಳು ಇಲ್ಲದೇ ಲೋಕಾಯುಕ್ತ ಅಧಿಕಾರಿಗಳನ್ನು ಆಹ್ವಾನಿಸಬೇಡಿ. ಈ ನಿರ್ಲಕ್ಷೃ ಮುಂದುವರಿದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಎ.ಸ್ವಾಮಿ, ರೈತ ಸಂಘದ ತಾಲೂಕು ಅಧ್ಯಕ್ಷ ಖಲಂದರ್ ಬಾಷಾ ಮಾತನಾಡಿ, ತಾಲೂಕಿನ ವಿಮುಕ್ತ ದೇವದಾಸಿ ಮಹಿಳೆಯರಿಗೆ 2019-20ನೇ ಸಾಲಿನ ಆದಾಯ ಉತ್ಪನ್ನಕರ ಚಟುವಟಿಕೆ ಯೋಜನೆಯಡಿ ಸಾಲ ಮತ್ತು ಸಹಾಯಧನ ತಲಾ ಐವತ್ತು ಸಾವಿರ ರೂ. ಸೇರಿದಂತೆ ಒಂದು ಲಕ್ಷ ರೂ.ಗಳನ್ನು ಆರು ವರ್ಷ ಕಳೆದರೂ ಹಣ ಬಿಡುಗಡೆಯಾಗಿಲ್ಲ. ಇದಲ್ಲದೇ ವಿಮುಕ್ತ ದೇವದಾಸಿಯರ ಸೌಲಭ್ಯಗಳು ಸಮರ್ಪಕವಾಗಿ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ತೋರಣಗಲ್ ಗ್ರಾಮದ ಸ.ನಂ.19ರಲ್ಲಿ ವಿಸ್ತೀರ್ಣ 1.35 ಎಕರೆ ಜಮೀನು ಪುರಾತನ ಕಾಲದಿಂದಲೂ ರುದ್ರಭೂಮಿಯಾಗಿದೆ. ಇಲ್ಲಿ ಎಸ್ಸಿ, ಎಸ್‌ಸ್ಟಿ ಹಾಗೂ ಹಿಂದುಳಿದ ವರ್ಗಗಳ ಎಲ್ಲ ಜನಾಂಗದವರು ಅಂತ್ಯಸಂಸ್ಕಾರ ಮಾಡಲಾಗುತ್ತದೆ. 2006ರಲ್ಲಿ ಕರ್ನಾಟಕ ಸರ್ಕಾರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಸರಿಗೆ ಪಹಣಿಯಲ್ಲಿ ಬದಲಾಗಿದೆ. ಇದನ್ನು ರುದ್ರ ಭೂಮಿಯಾಗಿ ಪರಿವರ್ತಿಸಲು ಕೇಳಿಕೊಳ್ಳಲಾಗಿದೆ. ಆದರೆ, ರುದ್ರಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಸ್ಮಶಾನವಿಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಸರ್ಕಾರ ಪಾಲಿಸುತ್ತಿಲ್ಲ. ಹಾಗೆಯೇ ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಎಂದು ಪರಿವರ್ತಿಸಲಾಗಿದ್ದು, ಕಾರ್ಡ್ ಬದಲಾಯಿಸಬೇಕೆಂದರು. ಮನವಿ ಆಲಿಸಿದ ಲೋಕಾಯುಕ್ತ ಅಧಿಕಾರಿಗಳು ಆಯಾ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಇತ್ಯರ್ಥ ಪಡಿಸುವಂತೆ ಸೂಚನೆ ನೀಡಿದರು. ನಂತರ ಜನರು ಅಹವಾಲು ಸಲ್ಲಿಸಿದರು.
ಗ್ರೇಡ್-2 ತಹಸೀಲ್ದಾರ್ ಸುಧಾ ಅರಮನೆ, ತಾಪಂ ಇಒ ಮಡಗಿ ಬಸಪ್ಪ, ಬಿಇಒ ಡಾ.ಐ.ಆರ್.ಅಕ್ಕಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.