

ಸಂಡೂರು: ಭಾರತವು ಬಹುಸಂಸ್ಕೃತಿಯ ರಾಷ್ಟ್ರ. ಇಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ಕನ್ನಡ ಪರಂಪರೆ ಬಗ್ಗೆ ಮಕ್ಕಳಿಗೆ ತಿಳಿಯುವಂತೆ ಮಾಡಿದರೆ ಸಂಸ್ಕೃತಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ. ನಮ್ಮಲ್ಲಿ ರಾಷ್ಟ್ರದ ಪರಂಪರೆಯ ಅರಿವು ಇದ್ದಲ್ಲಿ ಗೌರವ ಬೆಳೆಯುತ್ತದೆ ಸಾಹಿತಿ ಪ್ರೋ.ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಕೃಷ್ಣಾನಗರದ ಬಳಿಯ ಬಿಕೆಜಿ ಸಮೂಹ ಸಂಸ್ಥೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.
ಭಾಷೆಯೇ ಜನರ ಬದುಕು, ಭಾಷಾವಾರು ಪ್ರಾಂತ್ಯವಿಂಗಡಣೆ ಪ್ರತಿಯೊಬ್ಬರ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ. ಆದರೆ ಇಂದು ಅದು ಮಾಯವಾಗುತ್ತಿದೆ. ಅದನ್ನು ಉಳಿಸಬೇಕಾದರೆ ಭಾಷಾಭಿಮಾನ ಅವಶ್ಯಕ. ಶಾಲೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಉತ್ತಮ ಕಲಿಕಾ ವಾತಾವರಣವನ್ನು ಬಿಕೆಜಿ ಸಮೂಹ ಸಂಸ್ಥೆ ಒದಗಿಸುತ್ತಿದೆ. ರಾಜ್ಯೋತ್ಸವ ಸಮಾರಂಭದ ವೇದಿಕೆಗಳು ಆತ್ಮ ವಿಮರ್ಶೆಯ ವೇದಿಕೆಯಾಗಬೇಕು. ಕೇವಲ ಆಚರಣೆಗೆ ಸೀಮಿತವಾಗಬಾರದು ಎಂದು ಹೇಳುತ್ತಾ ಕನ್ನಡ ನಾಡಗೀತೆಯ ಅರ್ಥವನ್ನು ವಿವರಿಸಿದರು.
ಡಾ.ವಸುಂದರಾ ಭೂಪತಿ ಮಾತನಾಡಿ, ರಾಜ್ಯೋತ್ಸವ ವೇದಿಕೆಗಳು ಆತ್ಮವಿಮರ್ಶೆಯ ವೇದಿಕೆಗಳಾಗಬೇಕು. ಕೇವಲ ಆಚರಣೆಗೆ ಸೀಮಿತವಾಗಬಾರದು . ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದಿಂದ ದೇಶದ ಉನ್ನತಿ ಸಾಧ್ಯವಾಗಲಿದೆ. ದೇಶ, ವಿದೇಶಗಳಲ್ಲಿ ಅನೇಕ ಜನ ಹೆಸರಾಂತ ವಿಜ್ಞಾನಿಗಳು ಕರ್ನಾಟಕದವರೇ. ಕನ್ನಡವನ್ನು ಪ್ರತಿದಿನದ ವ್ಯವಹಾರದಲ್ಲಿ ಉಪಯೂಗಿಸುವ ಪ್ರಯತ್ನಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಕೆಜಿ ಸಂಸ್ಥಾಪಕಿ ಬಿ.ಕಮಲಮ್ಮ, ಸಂಸ್ಥಾಪಕ ಸದಸ್ಯ ಬಿ.ನಾಗನಗೌಡರು, ಬಿಕೆಜಿ ಶಿಕ್ಷಣ ಸಮೂಹ ಸಂಸ್ಥೆ ಪ್ರಾಚಾರ್ಯ ಕೆ.ವಿ.ಮೋಹನ್ ರಾವ್ ಮತ್ತು ಸಿಬ್ಬಂದಿ ಇದ್ದರು.
ವಿವಿಧ ತರಗತಿಯ ಮಕ್ಕಳು ಭರತನಾಟ್ಯ, ಮೈಸೂರು ದಸರ ಮೆರವಣಿಗೆಯ ಅಣುಕು, ವಿವಿಧ ಜಾನಪದ ನೃತ್ಯ, ಪಟ್ಟದ ಕುಣಿತ, ಹಾಗು ಕನ್ನಡ ಕವಿಗಳ, ಅನುಭವ ಮಂಟಪ, ಸಂಗೊಳ್ಳಿರಾಯಣ್ಣರ ಚರಿತ್ರೆಯನ್ನು ನೃತ್ಯರೂಪಕದಲ್ಲಿ ಪ್ರಸ್ತುತ ಪಡಿಸಿ ಗಮನ ಸೆಳೆದರು.