

ಸಂಡೂರು: ಕುಡುತಿನಿ ಭೂ ಸಂತ್ರಸ್ತರಿಗೆ ಬಳ್ಳಾರಿ ಜಿಲ್ಲಾ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ದರ ನೀಡಲು ಸಂಬಂಧಪಟ್ಟ ಉನ್ನತ ಆಡಳಿತ ಮಂಡಳಿ ಜಂಟಿ ಸಭೆ ಕರೆಯಬೇಕೆಂದು ಸಿಎಂ.ಸಿದ್ಧರಾಮಯ್ಯಗೆ ಬರೆದ ಮನವಿಪತ್ರವನ್ನು ವಿವಿಧ ಸಂಘಟನೆಗಳ ಮುಖಂಡರು ತೋರಣಗಲ್ ಉಪ ತಹಸೀಲ್ದಾರ್ ಸುಬ್ಬರಾವ್ ದೇಸಾಯಿಗೆ ಸೋಮವಾರ ಸಲ್ಲಿಸಿದರು.
ಕೆಐಎಡಿಬಿ ಬಳ್ಳಾರಿ ತಾಲೂಕಿಗೆ ಸೇರಿದ ಕುಡತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿ ವೀರಾಪುರ, ಕೊಳಗಲ್ಲು, ಸಿದ್ದಮ್ಮನಹಳ್ಳಿ(ಕುರುಗೋಡು), ಯರಂಗಳಿ ಗ್ರಾಮಗಳಿಗೆ ಸೇರಿದ ಸುಮಾರು 12,914.85 ಎಕರೆ ಜಮೀನನ್ನು ರೈತರ ಒಪ್ಪಿಗೆ ಇಲ್ಲದೆ 2010 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 14 ವರ್ಷಗಳಾದರೂ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರು 800ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಿಯಮ ಬಾಹಿರವಾಗಿ ಮಾಲೀಕರು ಭೂಮಿಗೆ ಬೆಲೆ ನಿಗದಿಪಡಿಸಿ ಮೂರು ಸಾವಿರಕ್ಕೂ ಅಧಿಕ ರೈತರನ್ನು ವಂಚಿಸಲಾಗಿದೆ ಎಂದು ದೂರಿದರು.
ಜಿಲ್ಲಾ ನ್ಯಾಯಾಲಯ ಹಾಗೂ ಸುಪ್ರೀಂಕೋರ್ಟ್ ಅನ್ಯಾಯದ ಭೂ ಬೆಲೆಯನ್ನು ರದ್ದುಮಾಡಿ, 2010ರ ಮೂಲ ಬೆಲೆಯನ್ನು ತಲಾ ಎಕರೆಗೆ ಸುಮಾರು 30.2 ಲಕ್ಷ ರೂ. ನಿಗದಿಪಡಿಸಿ ಬಡ್ಡಿ ಸಮೇತ ನೀಡಲು ಆದೇಶಿದೆ. ಇದರಂತೆ ದಾವೆ ಹೂಡಿದ ರೈತರಿಗೆ ಎಕರೆಗೆ ಒಂದು ಕೋಟಿ ಇಪ್ಪತ್ತು ಲಕ್ಷದಿಂದ ಒಂದು ಕೋಟಿ 30 ಲಕ್ಷದವರೆಗೆ ಸಂದಾಯವಾಗಿದೆ. ಉಳಿದ ಬಡ ರೈತರಿಗೆ ನೀಡಿರುವುದಿಲ್ಲ. ಒಟ್ಟು ಸುಮಾರು 10ರಿಂದ 13 ಸಾವಿರ ಕೊಟಿ ರೂ. ವಂಚನೆಯಾಗಿದೆ ಎಂದು ದೂರಿದರು.
ಕಂಪನಿಗಳ ಒಪ್ಪಂದಂತೆ ಮೂರು ವರ್ಷಗಳಲ್ಲಿ ಇಲ್ಲವೇ ಭೂ ಸ್ವಾಧೀನ ಕಾಯ್ದೆಯಂತೆ ಐದು ವಷರ್ಗಳಲ್ಲಿ ಕೈಗಾರಿಕೆಗಳನ್ನು ನಿರ್ಮಿಸಬೇಕಿತ್ತು, ಆದರೆ, 14 ವರ್ಷಗಳಾದರೂ ನಿರ್ಮಿಸಿಲ್ಲ. ಈ ನಡುವೆ ಬ್ರಹ್ಮಣಿ ಸ್ಟೀಲ್ ಕಂಪನಿಯು ಭೂ ಸಂತ್ರಸ್ತರನ್ನು ವಂಚಿಸಿದ್ದು, ಕೆಐಎಡಿಬಿ ಜೊತೆ ಶಾಮೀಲಾಗಿ ಅಕ್ರಮವಾಗಿ ಬೇರೊಂದು ಕಂಪನಿಗೆ (ಉತ್ತಮ್ ಗಾಲ್ವಾ) ಜಮೀನು ಮಾರಾಟ ಮಾಡಿದೆ. ಮಿತ್ತಲ್ ಕಂಪನಿಯು ಸ್ಟೀಲ್ ಕಂಪನಿ ನಿರ್ಮಾಣ ಮಾಡಲಾಗದೆಂದು ಹೇಳಿಕೊಂಡು ಭೂ ಸಂತ್ರಸ್ತರಿಗೆ ಉದ್ಯೋಗ ವಂಚಿಸುವ ಸೋಲಾರ್ ಪ್ಲಾಂಟ್ ನಿರ್ಮಿಸುವುದಾಗಿ ರಾಜ್ಯ ಸರ್ಕಾರದ ಮುಂದೆ ಅರ್ಜಿ ಸಲ್ಲಿಸುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.