

ಸಂಡೂರು: ಅನುದಾನ ಕೊರತೆಯಿಂದ ತಾಲೂಕಿನ ತೋರಣಗಲ್ 2ನೇ ವಾರ್ಡ್, ಚೋರನೂರು ಗ್ರಾಮದ ಡಾ.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದು, ಪಾಳು ಬಿದ್ದಿವೆ.
ಎರಡೂ ಕಡೆ 2019ರಲ್ಲಿ ಭವನ ಮಂಜೂರಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ತಲಾ 50 ಲಕ್ಷ ರೂ ವೆಚ್ಚದಲ್ಲಿ 100/100 ಸೈಜಿನಲ್ಲಿ ಡಾ.ಅಂಬೇಡ್ಕರ್ ಭವನ ಕಟ್ಟಡಗಳ ನಿರ್ಮಾಣ ಕಾಮಗಾರಿ 2022ರಲ್ಲಿ ಆರಂಭಿಸಲಾಗಿತ್ತು. ಆದರೆ, ತೋರಣಗಲ್‌ನಲ್ಲಿ ನಿರ್ಮಿಸಿರುವ ಭವನಕ್ಕೆ ಡಿಸಿ ಕಚೇರಿಯಿಂದ 50 ಲಕ್ಷ ರೂ. ಪೈಕಿ ಈಗಾಗಲೇ 39 ಲಕ್ಷ ರೂ. ಬಿಡುಗಡೆಯಾಗಿದೆ. ಉಳಿದ ಹಣ ಬರಬೇಕಿದ್ದು, ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಸುತ್ತಲೂ ಜಾಲಿಗಿಡಗಳು ವ್ಯಾಪಕವಾಗಿ ಬೆಳೆದಿವೆ.
ಒಳಾಂಗಣವಂತೂ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಪ್ಲಾಸ್ಟಿಕ್ ಚೀಲಗಳು, ಮದ್ಯದ, ನೀರಿನ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿವೆ. ಅಲ್ಲದೆ ಮಲಮೂತ್ರ ವಿಸರ್ಜನೆಯಿಂದ ಗಬ್ಬು ನಾರುತ್ತಿವೆ. ಚೋರನೂರು ಭವನದ ಸ್ಥಿತಿಯೂ ಹೇಳತೀರದು. ಸುತ್ತಲೂ ಗಿಡಗಂಟಿ, ಒಳಗಡೆ ಗೋಡೆಗಳಿಗೆ ಮಹಿಳೆಯರು ಸೆಗಣಿ ಕುಳ್ಳು ಬಡಿದಿದ್ದಾರೆ. ಪಾಳುಬಿದ್ದ ಗೋದಾಮುಗಳಂತಾಗಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಶೇ.75 ಹಣ ಬಿಡುಗಡೆಯಾಗಿದೆ. ತೋರಣಗಲ್‌ನಲ್ಲಿ ಡಾ.ಅಂಬೇಡ್ಕರ್ ಭವನದೊಳಗೆ ಸಿಮೆಂಟ್ ಕೆಲಸ ಮಾಡಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ಬಾಗಿಲು, ಕಿಟಕಿಗಳು ಬರಬಹುದು. ಚೋರನೂರು ಭವನದಲ್ಲಿ ಸಿಮೆಂಟ್ ಮಾಡಬೇಕಿದೆ. ಅದಾದ ಬಳಿಕ ಮುಂದಿನ ಕೆಲಸ ಕೈಗೆತ್ತಿಕೊಳ್ಳಲಾಗುವುದು. | ಜಯನಾಯಕ ಎಇಇ, ಕೆಆರ್‌ಐಡಿಎಲ್