

ಸಂಡೂರು: ಪ್ರತಿಯೊಬ್ಬರೂ ಕ್ರಾಂತಿಕಾರಿ ಭಗತ್‌ಸಿಂಗ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶದ ಸಾರ್ವಭೌಮತೆ, ಏಕತೆ, ಸಮಗ್ರತೆ, ಸೌಹಾರ್ದ ಕಾಪಾಡಲು ಕಂಕಣಬದ್ಧರಾಗಬೇಕು ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ ಜಿಲ್ಲಾ ಸಹ ಸಂಚಾಲಕ ವಿ.ದೇವಣ್ಣ ಹೇಳಿದರು.
ಕುರೇಕುಪ್ಪದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್‌ನಿಂದ ಭಾನುವಾರ ಭಗತ್‌ಸಿಂಗ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಗತ್‌ಸಿಂಗ್ ಅವರು ಸ್ವಾತಂತ್ರೃದ ಕಿಚ್ಚು ಹಚ್ಚಿದರು.
ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರೃ ಸಿಕ್ಕರೆ ಸಾಲದು, ಸಮಾಜವಾದಿ ಭಾರತ ನಿರ್ಮಾಣವಾಗಬೇಕೆಂಬ ಕನಸು ಕಂಡರು. ಈ ಹೋರಾಟಕ್ಕೆ ಹೆದರಿದ ಬ್ರಿಟಿಷರು ಭಗತ್‌ಸಿಂಗ್ ಅವರನ್ನು ಗಲ್ಲಿಗೇರಿಸಿದರು.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್ ಅವರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು.
ಪುರಸಭೆ ಅಧ್ಯಕ್ಷ ಕೆ.ಕಲ್ಗುಡೆಪ್ಪ, ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷ ಜಿ.ಪಂಪನಗೌಡ, ಕಟ್ಟಡ ಕಾರ್ಮಿಕರ ಫೆಡರೇಷನ್ ಸಂಚಾಲಕ ಸಿ.ಡಿ.ಹಾಲಸ್ವಾಮಿ, ತಾಲೂಕು ಮುಖಂಡ ಕೆ.ದೇವಣ್ಣ, ಕುರೇಕುಪ್ಪ ಘಟಕದ ಅಧ್ಯಕ್ಷ ಕೆ.ಸತ್ಯಣ್ಣ, ಪ್ರಮುಖರಾದ ಬ್ರಹ್ಮಚಾರಿ ವಿ.ಜಾನುಪ್ರಕಾಶ್, ಶಿವಾರೆಡ್ಡಿ, ಕೆ.ಶೀಲಪ್ಪ, ಜಗನ್ನಾಥ್ ಆಚಾರಿ, ತಾಯಪ್ಪ, ಎಚ್.ಶಿವಕುಮಾರ, ಕೆ.ಹಾಲೇಶ್, ಬಸವರಾಜ್ ಎನ್.ಮರಿಸ್ವಾಮಿ, ಹೊನ್ನೂರಪ್ಪ ಇದ್ದರು.