ಪರಿಸರ ಸಭೆ ರದ್ದು ಮಾಡಿ

Untitled design (20)
ಸಂಡೂರಿನ ಶಾಸಕರ ಸಂಪರ್ಕ ಕಚೇರಿಯಲ್ಲಿ ಸಂಸದರ ಪಿಎ ಪ್ರಕಾಶಗೆ ಕುಡಿತಿನಿ ಭೂ ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಗೌರವಾಧ್ಯಕ್ಷ ಯು.ಬಸವರಾಜ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ.ಸತ್ಯಬಾಬು, ಪ್ರಮುಖರಾದ ಎಮ್.ತಿಪ್ಪೇಸ್ವಾಮಿ, ಶ್ರೀಧರ , ಕರವೇ ಜಂಗ್ಲಿಸಾಬ್, ನರಸಿಂಹರಾಜು, ತಿಮ್ಮಪ್ಪ, ಸಂಪತ್, ಮಹಾರುದ್ರಗೌಡ, ಸುರೇಶ ಗೌಡ, ಜಂಬಣ್ಣ, ಹೋಳಿಗಿ ಸಿದ್ದಪ್ಪ, ಶ್ರೀಪಾದ, ಶಿವಣ್ಣ ಇತರರಿದ್ದರು.
Published on

ಸಂಡೂರು: ಕೈಗಾರಿಕೆಗಳ ಆರಂಭಕ್ಕೆ ಸಂಬಂಧಿಸಿದಂತೆ ಸೆ.17ರಂದು ಕರೆದಿರುವ ಪರಿಸರ ಸಭೆ ರದ್ದುಗೊಳಿಸಲು ಆಗ್ರಹಿಸಿ ಕುಡಿತಿನಿ ಭೂ ಸಂತ್ರಸ್ತ ಹೋರಾಟಗಾರರು ಮತ್ತು ರೈತರು ಪಟ್ಟಣದಲ್ಲಿ ಸಂಸದರ ಪಿಎ ಪ್ರಕಾಶ ಹಾಗೂ ಶಾಸಕರ ಪಿಎ ಚನ್ನಪ್ಪಗೆ ಗುರುವಾರ ಮನವಿ ಸಲ್ಲಿಸಿದರು.

ಅರ್ಸೆಲ್ಲರ್ ಮಿತ್ತಲ್, ಎನ್‌ಎಂಡಿಸಿ ಸೇರಿದಂತೆ ಮೂರು ಬೃಹತ್ ಕೈಗಾರಿಕೆ ಸ್ಥಾಪನೆಗೆ ಕುಡಿತಿನಿ ಹಾಗೂ ಹರಗಿನಡೋಣಿ ರೈತರಿಂದ ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹೀಗಾಗಿ ಕೆಐಎಡಿಬಿ ಸೆ.17ರಂದು ಕರೆದಿರುವ ಪರಿಸರ ಸಭೆಯನ್ನು ರದ್ದುಗೊಳಿಸಬೇಕು. ಹೊಸ ಭೂ ಬೆಲೆಯನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಕುಡತಿನಿ, ಹರಗಿನಡೋಣಿ ಗ್ರಾಮದ ಸುಮಾರು 5368.33 ಎಕರೆ ಜಮೀನುಗಳಲ್ಲಿ ಕೋಲ್ಡ್ ರೋಲ್ಡ್ ಗ್ರೇನ್ ಓರಿಯೆಂಟೆಡ್ ಸ್ಟೀಲ್ ಪ್ಲಾಂಟ್‌ನ ನಿರ್ಮಾಣಕ್ಕೆ ಪ್ರಾಸ್ತಾವನೆ ಇದೆ. ಕುಡತಿನಿಯ 200 ಎಕರೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಣ್ಣ ಕೈಗಾರಿಕೆಗೆ ಯೋಜನೆ ರೂಪಿಸಿ ಸಾರ್ವಜನಿಕ ಸಭೆಯನ್ನು ಕರೆದಿರುವುದು ಸರಿಯಲ್ಲ. ಕುಡತಿನಿ ಪಟ್ಟಣ ಪಂಚಾಯಿತಿ, ಬೆಳಗಲ್ ಪಂಚಾಯಿತಿ ಹಾಗೂ ವೇಣಿವೀರಾಪುರ ವ್ಯಾಪ್ತಿಯ ಏಳುಬೆಂಚಿ ಗ್ರಾಮಗಳು ಸಭೆಯನ್ನು ವಿರೋಧಿಸಿವೆ ಎಂದು ತಿಳಿಸಿದರು.

ಈಗಾಗಲೇ ಸಿಎಂ ಸಿದ್ರಾಮಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಮನವರಿಕೆ ಮಾಡಲಾಗಿದೆ. ರೈತರಿಗೆ ಅನ್ಯಾಯವಾಗಿದ್ದಕ್ಕೆ ಸೂಕ್ತವಾಗಿ ಸ್ಪಂದಿಸುವ ಭರವಸೆ ಸಿಕ್ಕಿದೆ. ಭೂಮಿ ಬೆಲೆ ಗಗನಕ್ಕೇರಿದ್ದು 1ಎಕರೆ ಭೂಮಿ 1 ಕೋಟಿ ರೂ.ಗೂ ಹೆಚ್ಚಿನ ಬೆಲೆ ಬಾಳುತ್ತದೆ. ಆದರೆ, ರೈತರಿಂದ 8 ಲಕ್ಷ ರೂ.ಗೆ ಎಕರೆಯಂತೆ ಕೆಐಎಡಿಬಿ ಬೆಲೆ ನಿಗದಿಪಡಿಸಿ ಜಮೀನು ಕೊಂಡುಕೊಂಡಿದೆ. ಹೀಗಾಗಿ ಸರ್ಕಾರದಿಂದ ನ್ಯಾಯ ಕೊಡಿಸುವ ಕಾರ್ಯವಾಗಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net