

ಸಂಡೂರು: ಗಾಯನಕ್ಕೆ ಅಗಾಧ ಸೇವೆ ಸಲ್ಲಿಸಿದ ತಾಲೂಕಿನ ಬಂಡ್ರಿ ಗ್ರಾಪಂ ವ್ಯಾಪ್ತಿಯ ಗೊಲ್ಲರಹಟ್ಟಿ ಗ್ರಾಮದ ಕಲಾವಿದ ದಳವಾಯಿ ಚಿತ್ತಪ್ಪ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ಫಲಕ ಮತ್ತು 25 ಸಾವಿರ ರೂ. ಬಹುಮಾನ ನೀಡಿ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಗುರುವಾರ ಸನ್ಮಾನಿಸಿದರು.
ಮೂರು ತಿಂಗಳ ಹಿಂದೆ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿತ್ತು. ಆರೋಗ್ಯ ಸಮಸ್ಯೆಯಿಂದ ದಳವಾಯಿ ಚಿತ್ತಪ್ಪ ಅವರು ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಮನೆಗೆ ಭೇಟಿ ನೀಡಿ ಪ್ರಶಸ್ತಿ ಮತ್ತು ಬಹುಮಾನ ನೀಡಿ ಗೌರವಿಸಲಾಗಿದೆ.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಹಿರಿಯ ಜಾನಪದ ಕಲಾವಿದ ದಳವಾಯಿ ಚಿತ್ತಪ್ಪ ಅವರಿಗೆ ಪ್ರಶಸ್ತಿ ದೊರೆತಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ. ಅವರು ಜಾನಪದ ಕ್ಷೇತ್ರದಲ್ಲಿ ಜ್ಞಾನ ಜ್ಯೋತಿಯಾಗಿ ಕಂಗೊಳಿಸುತ್ತಿದ್ದಾರೆ. ದಳವಾಯಿ ಚಿತ್ತಪ್ಪ ಅವರ ಜ್ಞಾನ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಗೊಲ್ಲರಹಟ್ಟಿಗಳ ಯುವಕರು ಮುಂದಾಗಲಿ. ಅವರ ಜಾನಪದ ಮಹಾಕಾವ್ಯ ಪರಂಪರೆಯನ್ನು ಇಂದಿನ ಆಧುನಿಕತೆಯ ಸಂದರ್ಭದಲ್ಲಿ ಉಳಿಸಬೇಕಾಗಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಪ್ರೊ.ಕಲಮರಹಳ್ಳಿ ಮಲ್ಲಿಕಾರ್ಜುನ ಮಾತನಾಡಿ, ಕಲಾವಿದ ದಳವಾಯಿ ಚಿತ್ತಪ್ಪ ಅವರು ಸಾಂಸ್ಕೃತಿಕ ವೀರರಾದ ಎತ್ತಪ್ಪ, ಜುಂಜಪ್ಪ ಅವರ ಕುರಿತ ಅನೇಕ ಮಹಾಕಾವ್ಯಗಳನ್ನು ಹಗಲು ರಾತ್ರಿ ಎನ್ನದೇ ಸಂಗ್ರಹಿಸಿಕೊಂಡಿದ್ದಾರೆ. ಅವರ ಅನುಭವ ಹಾಗೂ ಜ್ಞಾನದ ಹಿರಿಮೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ, ಕೂಡ್ಲಿಗಿ ತಾಲೂಕಿನ ಕಾಡುಗೊಲ್ಲ ಸಮುದಾಯದ ಅಧ್ಯಕ್ಷ ದೊಡ್ಡಪ್ಪ, ರೈತ ಸಂಘದ ಗುರುಲಿಂಗಪ್ಪ, ಮಾಜಿ ತಾಪಂ ಸದಸ್ಯ ಎಂ.ಬಿ.ಅಯ್ಯನಹಳ್ಳಿ ರಂಗಪ್ಪ, ಬಂಡ್ರಿ ಗೊಲ್ಲರಹಟ್ಟಿಯ ಲಕ್ಷ್ಮೀದೇವಿ, ರಂಗಭೂಮಿ ಶಿಕ್ಷಕ ಕೂಡ್ಲಿಗಿಯ ಶಿವನಾಯಕ ದೊರೆ, ಪ್ರಾಧ್ಯಾಪಕ ಡಾ.ಹನುಮಂತ ಗೌರಿಪುರ, ಡಾ.ಸಿದ್ದೇಶ ಕಾತ್ರಿಕೆಹಟ್ಟಿ, ಬಾಲರಾಜ, ಶಿವಪುರದ ದೊಡ್ಡಪ್ಪ, ವಿರೇಶಪ್ಪ, ದಳವಾಯಿ ಇತರರಿದ್ದರು.