ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ವಿವಿಧ ಲಸಿಕೆಗಳು ಸಹಕಾರಿ

17-SanduruP2
Published on

ಸಂಡೂರು: ಹಲವು ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಣೆ ಮಾಡಲು ಲಸಿಕೆಗಳ ಬಳಕೆ ಅತ್ಯಂತ ಪ್ರಮುಖವಾದದ್ದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು.

ತಾಲೂಕಿನ ಹೊಸದರೋಜಿ ಗ್ರಾಮದ ನಾಲ್ಕನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಲಸಿಕೆ ದಿನ ಅಥವಾ ರಾಷ್ಟ್ರೀಯ ರೋಗ ನಿರೋಧಕ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಹನ್ನೆರಡು ಮಾರಕ ರೋಗಗಳ ತಡೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸರ್ಕಾರ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದೆ. ನಿಗದಿತ ವೇಳಾಪಟ್ಟಿ ಪ್ರಕಾರ ಹುಟ್ಟಿನಿಂದ 16 ವರ್ಷದವರೆಗೂ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸಿದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಂಪೂರ್ಣ ಲಸಿಕೆ ಪಡೆಯುವುದರಿಂದ ದೇಹದಲ್ಲಿ ಮಾರಕ ರೋಗಗಳ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಹೊಸ ಹೊಸ ಲಸಿಕೆಗಳು ಸೇರಿ ಒಟ್ಟು 12 ಲಸಿಕೆಗಳಾದ ಬಿಸಿಜಿ, ಹೆಪಟೈಟಿಸ್ ಬಿ, ಪೋಲಿಯೊ, ಡಿಪ್ತೀರಿಯಾ, ಪರ್ಟೂಸಿಸ್, ಟೆಟನಸ್, ಹಿಬ್, ನಿಮೋಕಾಕಲ್ ಕಾಂಜುಗೆಟ್, ರೋಟಾ, ಮೀಜಲ್ಸ್, ರುಬೆಲ್ಲಾ, ಜಪಾನೀಸ್.ಎನ್ ಸೆಪಿಲೈಟಿಸ್ 12 ಲಸಿಕೆಗಳನ್ನು ನಿಗದಿತ ವೇಳಾಪಟ್ಟಿಯ ಪ್ರಕಾರ ಲಸಿಕೆ ಕೊಡಿಸಬೇಕು ಎಂದರು.

ಲಸಿಕೆಗಳೊಂದಿಗೆ ಪೂರಕವಾಗಿ ಇರಳು ಕುರುಡು ನಿವಾರಣೆಗೆ ವಿಟಾವಿನ್ ಎ ದ್ರಾವಣವನ್ನು 6 ತಿಂಗಳ ಅಂತರಗಳಲ್ಲಿ 5 ವರ್ಷದೊಳಗೆ ಒಟ್ಟು 9 ಡೋಸ್‌ಗಳನ್ನು ನೀಡಲಾಗುತ್ತದೆ. ಅದನ್ನು ತಪ್ಪದೇ ಕೊಡಿಸಬೇಕು. ತಾಯಂದಿರು ಶಿಶುಗಳಿಗೆ ಲಸಿಕೆ ಕೊಡುವುದರೊಂದಿಗೆ ತಾಯಿಹಾಲನ್ನು ಎರಡು ವರ್ಷದ ವರೆಗೂ ತಪ್ಪದೇ ಕುಡಿಸಬೇಕು. 6 ತಿಂಗಳ ನಂತರ ಪೂರಕ ಆಹಾರವನ್ನು ಕೊಡಿಸಬೇಕು. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದರು.

ಇದೇ ವೇಳೆ ಪೌಷ್ಟಿಕ ಆಹಾರ ತಯಾರಿಸುವ ಕುರಿತ ಕರಪತ್ರಗಳನ್ನು ವಿತರಣೆ ಮಾಡಲಾಯಿತು. ತಾಯಂದಿರಾದ ಲಕ್ಷ್ಮೀ, ಶಿಲ್ಪಾ, ಶ್ರಾವಣಿ, ಆಫ್ರಿನಾ, ನಗೀನಾ, ಫೌಜಿಯಾ, ಶಶಿಕಲಾ, ಮಂಜುಳಾ, ರಾಧಾ, ಪಾರ್ವತಿ, ವಿರುಪಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net