

ಸಂಡೂರು: ಏಳು ದಿನಗಳ ಶಿಬಿರವು ವಿಶೇಷ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿ, ಎಲ್ಲ ಕುಟುಂಬಗಳ ಸಾಮಾಜಿಕ ಸಮೀಕ್ಷೆ ಹಾಗೂ ಆರೋಗ್ಯ ತಪಾಸಣೆ ನಡೆಯಲಿವೆ ಎಂದು ಪ್ರಾಧ್ಯಾಪಕ ಡಾ.ಚೌಡಪ್ಪ ತಿಳಿಸಿದರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳಿಂದ ತಾಲೂಕಿನ ಹಿರೇಕೆರೆಯಾಗಿನಹಳ್ಳಿಯಲ್ಲಿ ಹಮ್ಮಿಕೊಂಡಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು.
ಅಗ್ನಿಶಾಮಕ ದಳದಿಂದ ಅಗ್ನಿಯ ಅವಘಡಗಳ ಬಗ್ಗೆ ಪ್ರಾತ್ಯಕ್ಷಿಕೆ ತರಬೇತಿ ಹಾಗೂ ವಿಶೇಷ ಪರಿಣಿತರಿಂದ ಬೀದಿ ನಾಟಕ, ಜಾಗೃತಿ ಗೀತೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಂಯೋಜನಾಧಿಕಾರಿ ಡಾ.ಕೆ.ಜಿ.ಸುಮಾ ಮಾತನಾಡಿ, ಗ್ರಾಮದಲ್ಲಿ ಹದಿಹರೆಯದ ಮಕ್ಕಳಿಗೆ ವಿಶೇಷ ಗುಂಪು ಚರ್ಚೆ ಹಮ್ಮಿಕೊಂಡು, ಆರೋಗ್ಯ, ಸ್ವಚ್ಛತೆ, ಪೋಲಿಕ್ ಆ್ಯಸಿಡ್, ಕಬ್ಬಿಣದ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುವುದು.
ವೈಯಕ್ತಿಕ ಸಮಸ್ಯೆಗಳ ಬಗ್ಗೆ ಆಪ್ತಸಮಾಲೋಚನ ಸೇವೆಗಳನ್ನು ನೀಡಲಾಗುವುದು. ಜತೆಗೆ ಗ್ರಾಮದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಅಪೌಷ್ಟಿಕ, ಮಹಿಳಾ ಸಬಲೀಕರಣ, ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಗ್ರಾಮದ ಸಹಿಪ್ರಾಶಾ ಮಕ್ಕಳು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಸ್ವಚ್ಛತೆ, ಆರೋಗ್ಯ, ಅಪೌಷ್ಟಿಕ, ಮತ್ತು ಬಾಲ್ಯವಿವಾಹ ಕುರಿತಾದ ವಿವಿಧ ಘೋಷವಾಕ್ಯಗಳನ್ನು ಕೂಗಿದರು. ಗ್ರಾಮದ ಮುಖಂಡ ಟಿ.ವೀರೇಶ, ಸಹ ಸಯೋಜಕರಾದ ಡಾ.ಜಿ.ಹನುಮಂತ, ಲಕ್ಷ್ಮಣ ತೋಳಿ ಮಾತನಾಡಿದರು.