ಗ್ರಾಪಂ ತೆರಿಗೆ ಹಣ ಜಮಾ ಮಾಡಿಕೊಳ್ಳಲು ನಿರಾಕರಣೆ, ಪಿಡಿಒ, ಕಾರ್ಯದರ್ಶಿಗಳ ಆರೋಪ

Sanduru SBI Officers Behavior
ಫೆ.12ರಂದು ಗ್ರಾಮೀಣ ಬ್ಯಾಂಕ್ ನೀಡಿದ ಗ್ರಾಪಂವೊಂದರ ಚೆಕ್‌ಗೆ ಪೇಯೀಸ್ ಎಂಡೋರ್ಸ್‌ಮೆಂಟ್ ರಿಕ್ವಾಯರ್ಡ್ ಎಂದು ಸಂಡೂರು ಎಸ್‌ಬಿಐ ಶಾಖೆ ಹಿಂಬರಹ ಮೂಲಕ ವಾಪಸ್ ಕಳಿಸಿರುವುದು.
Published on

ಕೆ. ಪ್ರಲ್ಹಾದ ಸಂಡೂರು

ಗ್ರಾಮ ಪಂಚಾಯಿತಿಗಳು ತೆರಿಗೆ ವಸೂಲಿ ಮಾಡಿದ ಹಣವನ್ನು ಎಸ್‌ಬಿಐ ಶಾಖೆಗಳಿಗೆ ಜಮಾ ಮಾಡಲು ಹೋದರೆ ನಿರಾಕರಿಸುತ್ತಿವೆ. ಈ ಕುರಿತು ಸ್ವತಃ ಪಿಡಿಒ ಹಾಗೂ ಕಾರ್ಯದರ್ಶಿಗಳೇ ದೂರುತ್ತಿದ್ದಾರೆ.

ಬ್ಯಾಂಕ್‌ಗಳು ಆರ್ಥಿಕ ಪ್ರಗತಿಯ ಮೂಲ ಸ್ಥರಗಳು ಎಂದು ವ್ಯಾಖ್ಯಾನಿಸಲಾಗುತ್ತದೆ. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲೂ ಅವುಗಳ ಪಾತ್ರ ಪ್ರಮುಖವಾಗಿದೆ. ಸರ್ಕಾರದ ಯೋಜನೆಗಳು, ನೌಕರರ ವೇತನ ಖಜಾನೆ ಮೂಲಕ ನಿರ್ವಹಿಸಲಾಗುತ್ತದೆ. ಸರ್ಕಾರದ ಖಜಾನೆ-ಉಪ ಖಜಾನೆಗಳಿಗೆ ಮಧ್ಯವರ್ತಿಯಾಗಿ ಆಯಾ ಭಾಗದ ರಾಷ್ಟ್ರೀಕೃತ ಬ್ಯಾಂಕ್‌ಗಳು ಕೆಲಸ ಮಾಡುತ್ತವೆ. ಸಂಡೂರಲ್ಲಿ ವಿವಿಧ ಇಲಾಖೆ ಅನುದಾನ, ವೇತನ ಮತ್ತಿತರ ಸರ್ಕಾರದ ವ್ಯವಹಾರಗಳನ್ನು ಎಸ್‌ಬಿಐ ನಿರ್ವಹಿಸುತ್ತದೆ. ಆದರೆ, ಗ್ರಾಪಂಗಳಿಂದ ಹಣ ಕಟ್ಟಿಸಿಕೊಳ್ಳುತ್ತಿಲ್ಲ. ಬದಲಿಗೆ ಗ್ರಾಮೀಣ ಬ್ಯಾಂಕ್ ನೀಡುವ ಚೆಕ್‌ಗೆ ಪೇಯೀಸ್ ಎಂಡೋರ್ಸ್‌ ಮೆಂಟ್ ರಿಕ್ವಾಯರ್ಡ್ ಎಂದು ಹಿಂಬರಹ ಬರೆದುಕೊಡುತ್ತಿದೆ.

ಸಾರ್ವಜನಿಕರಿಂದ ಸಂಗ್ರಹಿಸಿದ ಆಸ್ತಿ ತೆರಿಗೆ ಹಣವನ್ನು ಗ್ರಾಪಂ ವ್ಯಾಪ್ತಿಯ ಬ್ಯಾಂಕ್‌ಗಳಿಗೆ ಜಮಾ ಮಾಡಬೇಕು. ಬಹುತೇಕ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಹತ್ತಿರದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ತೆರಿಗೆ ಹಣ ಕಟ್ಟಿ ನಂತರ ಆ ಬ್ಯಾಂಕ್‌ನ ಚೆಕ್ ಮೂಲಕ ಎಸ್‌ಬಿಐಗೆ ವರ್ಗಾಯಿಸುತ್ತಾರೆ. ಆಸ್ತಿ ತೆರಿಗೆಯಲ್ಲಿ ಶೇ.3 ಭಿಕ್ಷುಕರ ಕರವನ್ನು ಸಮಾಜ ಕಲ್ಯಾಣ, ಶೇ.15 ಆರೋಗ್ಯ ಉಪಕರವನ್ನು ಆರೋಗ್ಯ ಇಲಾಖೆ, ಗ್ರಂಥಾಲಯ ಉಪಕರ ಶೇ.6 ಸೇರಿ ಒಟ್ಟು ಶೇ.24 ತೆರಿಗೆ ಹಣವನ್ನು ಖಜಾನೆಯ ಕೆ2 ಮೂಲಕ ಆಯಾ ಇಲಾಖೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕವೇ ವರ್ಗಾಯಿಸಬೇಕು. ಆದರೆ, ಸಂಡೂರು ಎಸ್‌ಬಿಐ ಶಾಖೆಗಳಲ್ಲಿ ಕಳೆದೊಂದು ವರ್ಷದಿಂದ ಹಣವನ್ನು ಜಮಾ ಮಾಡಿಕೊಳ್ಳುತ್ತಿಲ್ಲ. ಗ್ರಾಪಂ ಖಾತೆಗಳ ನಿರ್ವಹಣೆಯಿಂದ ಲಾಭವಿಲ್ಲ ಎಂಬ ಉದ್ದೇಶದಿಂದ ಬ್ಯಾಂಕ್ ಅಧಿಕಾರಿಗಳು ಹೀಗೆ ವರ್ತಿಸುತ್ತಿದ್ದಾರೆ. ಇದರಿಂದ ನಾವು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪಿಡಿಒ ಹಾಗೂ ಕಾರ್ಯದರ್ಶಿಗಳು ದೂರುತ್ತಾರೆ.

ಲೀಡ್ ಬ್ಯಾಂಕ್ ಮ್ಯಾನೇಜರ್ ನಿರ್ಲಕ್ಷ್ಯ ಆರೋಪ: ಪಟ್ಟಣದ ಎಸ್‌ಬಿಐ ಮೇನ್ ಬ್ರಾಂಚ್, ಎಸ್‌ಬಿಐ (ಎಡಿಬಿ) ಮತ್ತು ತೋರಣಗಲ್‌ನಲ್ಲಿ ಎಸ್‌ಬಿಐ ಶಾಖೆಯಿದೆ. ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ನಡೆಯುವ ಬ್ಯಾಂಕ್ ಅಧಿಕಾರಿಗಳ ಸಭೆಗಳಲ್ಲಿ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ಚರ್ಚೆಗಳು ನಡೆಯುತ್ತವೆ. ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷೃದ ಬಗ್ಗೆ ಸಭೆಯಲ್ಲಿ ಆರೋಪಗಳು ಕೇಳಿಬರುತ್ತವೆ. ಆದಾಗ್ಯೂ ಅಧಿಕಾರಿಗಳು ತಿದ್ದಿಕೊಳ್ಳುತ್ತಿಲ್ಲ. ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಈ ಕುರಿತು ತಿಳಿಸಲು ಕರೆ ಮಾಡಿದರೆ ಸ್ವೀಕರಿಸಲ್ಲ ಎಂದು ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ಎಸ್‌ಬಿಐ ಅಧಿಕಾರಿಗಳಿಗೂ ಗ್ರಾಪಂಗಳ ತೆರಿಗೆ ಹಣ ಜಮಾ ಮಾಡಿಕೊಳ್ಳಲು ಹಾಗೂ ಖಾತೆಗಳನ್ನು ನಿರ್ವಹಿಸಲು ಸೂಚಿಸಲಾಗುವುದು.| ಪಿ.ವಿವೇಕಾನಂದ ಪ್ರೊಬೇಷನರಿ ಇಒ, ಸಂಡೂರು ತಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net