ನಶಿಸುತ್ತಿರುವ ಜಾನಪದ ಪ್ರಕಾರಗಳ ರಕ್ಷಣೆ ಅಗತ್ಯ

JANAPADA
ಸಂಡೂರಿನ ಸಪ್ರದ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಸಿ.ಮಂಜುನಾಥ ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿದರು. ಪರಿಷತ್ ಜಿಲ್ಲಾ ಘಟಕದ ಪ್ರ.ಕಾ. ಡಾ.ಅಶ್ವರಾಮು, ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಹೆಬ್ಬಾಳ್ ಇದ್ದರು.
Published on

ಸಂಡೂರು: ನಶಿಸುತ್ತಿರುವ ಜಾನಪದ ಕಲಾ ಪ್ರಕಾರಗಳನ್ನು ಸಂರಕ್ಷಿಸುವ ಜತೆಗೆ ರಾಜ್ಯಾದ್ಯಂತ ಜಾನಪದ ಜಾತ್ರೆ ಪುನರಾರಂಭಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಹೇಳಿದರು.

ಪಟ್ಟಣದ ಸಪ್ರದ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಸಂಡೂರು ಹಾಗೂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಜಾನಪದ ಜಾತ್ರೆ ಆಯೋಜಿಸುವುದರಿಂದ ಬಡ ಕಲಾವಿದರಿಗೆ ಆರ್ಥಿಕ ಸಹಾಯವಾಗುವುದರ ಜತೆ ಕಣ್ಮರೆಯಾಗುತ್ತಿರುವ ಕಲೆಗಳನ್ನು ಪುನಶ್ಚೇತನಗೊಳಿಸಬಹುದು. ಪರಿಷತ್ ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಶಾಲೆ-ಕಾಲೇಜುಗಳಲ್ಲಿ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ.

ಜಾನಪದ ಕಲೆಯ ಉಳಿವಿಗೆ ಶ್ರಮಿಸಿದ ಜಾನಪದ ತಜ್ಞ ನಾಡೋಜ ಎಚ್.ಎಲ್.ನಾಗೇಗೌಡರನ್ನು ಸ್ಮರಿಸಿದ ಮಂಜುನಾಥ್, ಕನಸಿನ ಕೂಸಾದ ಜಾನಪದ ಪರಿಷತ್ ಹೆಮ್ಮರವಾಗಿ ಬೆಳೆಯುತ್ತಿದೆ. ಅದರ ಆಶಯಗಳನ್ನು ಜಿಲ್ಲಾ, ತಾಲೂಕು ಘಟಕಗಳು ಅನುಷ್ಠಾನಗೊಳಿಸಲು ಶ್ರಮಿಸಲಿವೆ ಎಂದರು.

ಪರಿಷತ್ ಜಿಲ್ಲಾ ಘಟಕದ ಪ್ರ.ಕಾ. ಡಾ.ಅಶ್ವರಾಮು ಮಾತನಾಡಿ, ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿರುವ ಜನಪದ ಪರಂಪರೆ ವೈಜ್ಞಾನಿಕ ತಿಳಿವಳಿಕೆ ನೀಡುತ್ತದೆ. ಜಾನಪದವು ಜೀವಪರವಾದುದು. ಆಯಾ ಪ್ರಾದೇಶಿಕ, ಕೌಟುಂಬಿಕ ಜೀವನದ ದೈನಂದಿನ ಚಟುವಟಿಕೆಗಳ ಸಂಬಂಧಗಳನ್ನು ಬೆಸೆದು ಬೆರೆತುಕೊಳ್ಳುವುದೇ ಜಾನಪದ ಎಂದ ಅವರು, ಸರ್ಕಾರ ಜಾನಪದ ಜಾತ್ರೆ ಯೋಜನೆಯನ್ನು ಪ್ರತಿ ಶಾಲೆ-ಕಾಲೇಜುಗಳಲ್ಲಿ ಪ್ರಾರಂಭಿಸಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಹೆಬ್ಬಾಳ್, ಇತಿಹಾಸ ವಿಭಾಗದ ಉಪನ್ಯಾಸಕ ತಳವಾರ ನರಸಿಂಹ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಬಸವರಾಜ ಬಣಕಾರ, ಉಪನ್ಯಾಸಕರಾದ ಈ.ಜಿ. ರೇಖಾ, ಮಹೇಶ್ ಹಾಗೂ ವಿದ್ಯಾರ್ಥಿಗಳು ಲಂಬಾಣಿ ನೃತ್ಯ, ಹಲಗೆವಾದನ ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅತಿಥಿಗಳು ಹಾಗೂ ಪ್ರಾಚಾರ್ಯರನ್ನು ಎತ್ತಿನ ಬಂಡಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ವಿದ್ಯಾರ್ಥಿ ನಾಗರಾಜ, ದೊಡ್ಡಪ್ಪ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ, ಹುಲಿರಾಜ, ದೇವರಾಜ, ಅಸೀಫ್, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net