

ಸಂಡೂರು: ತಾಲೂಕಿನ ವಡ್ಡು, ಬನ್ನಿಹಟ್ಟಿ ಗ್ರಾಮ ಪಂಚಾಯಿತಿಗಳ ನೂತನ ಕಟ್ಟಡ ಹಾಗೂ ವಿವಿಧೆಡೆ ಡಿಎಂಎಫ್ ನಿಧಿಯಿಂದ ಕೈಗೊಂಡ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ ಗುರುವಾರ ಪರಿಶೀಲಿಸಿದರು.
ನಾರಿಹಳ್ಳ ಡ್ಯಾಂ ಬ್ಯೂಟಿಫಿಕೇಷನ್ ಡೆವಲೆಪ್ಮೆಂಟ್ ಕಾಮಗಾರಿ, ಕೃಷ್ಣಾನಗರದ ಗ್ರಾಪಂ ಕಟ್ಟಡ, 2.87 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಂಡೂರಿನ ಕೃಷಿ ಇಲಾಖೆ ಕಚೇರಿ ಹಾಗೂ ಕಸಾಪ ಕಟ್ಟಡ, ಸಂಡೂರು ಶಿವಪುರ ಕೆರೆ ಕಾಮಗಾರಿ, ಸಿಸಿ ರಸ್ತೆ, ಫೆನ್ಸಿಂಗ್, ನಿರ್ಮಿತಿ ಕೇಂದ್ರ ನಿರ್ಮಿಸುತ್ತಿರುವ ಸಂಡೂರಿನ ಇಂಡೋರ್ ಸ್ಟೇಡಿಯಂ, ಹಿಂದುಳಿದ ವರ್ಗದ ಹಾಸ್ಟೆಲ್ ಕಾಮಗಾರಿಗಳನ್ನು ಪರಿಶೀಲಿಸಿ, ಗುಣಮಟ್ಟದಿಂದ ಕೂಡಿರಬೇಕು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆಸದಂತೆ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ತಾಲೂಕು ಕಚೇರಿಯಲ್ಲಿ ಸೆ.16ಕ್ಕೆ ಪ್ರಜಾಪ್ರಭುತ್ವ ದಿನದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪೌರಾಡಳಿತ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಡಿಸಿ ತಿಳಿಸಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ತಹಸೀಲ್ದಾರ್ ಅನಿಲ್ ಕುಮಾರ್, ಎಡಿಎ ಮಂಜುನಾಥ ರೆಡ್ಡಿ, ಪಿಡಬ್ಲುೃಡಿ ಎಇಇ ಕೃಷ್ಣನಾಯ್ಕ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್, ದರೋಜಿ ಈಶಣ್ಣ ಇತರರಿದ್ದರು.