ತೀರುವಳಿ ಕರಾರು ಹಿಂಪಡೆಯಿರಿ

Sandur tree counting insist
ಅರಣ್ಯ ಇಲಾಖೆ ಕಾಯ್ದೆಗೆ ವಿರುದ್ಧವಾಗಿ ಮರಗಳ ಎಣಿಕೆ ಕಾರ್ಯದಲ್ಲಿ ತೊಡಗಿರುವ ಕೆಐಒಸಿಎಲ್ ಸಿಬ್ಬಂದಿ ವಿರುದ್ಧ ಕ್ರಮ ವಹಿಸಬೇಕೆಂದು ಆಗ್ರಹಿಸಿ ಸಂಡೂರಿನ ವಲಯ ಅರಣ್ಯಾಧಿಕಾರಿ ಸೈಯದ್ ದಾದಾ ಖಲಂದರ್‌ಗೆ ಜನಸಂಗ್ರಾಮ ಪರಿಷತ್ತಿನಿಂದ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷ ಟಿ.ಎಂ.ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ಮೂಲೆಮನೆ ಈರಣ್ಣ ಇದ್ದರು.
Published on

ಸಂಡೂರು: ದೇವದಾರಿ ಅರಣ್ಯ ಪ್ರದೇಶದಲ್ಲಿ ಕೆಐಒಸಿಎಲ್‌ದಿಂದ ಮರಗಳ ಎಣಿಕೆ ಮಾಡುತ್ತಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಜನಸಂಗ್ರಾಮ ಪರಿಷತ್ ವಿರೋಧಿಸಿವೆ. ಎರಡೂ ಸಂಘಟನೆಗಳ ಪ್ರಮುಖರು ದೇವದಾರಿ ಬೆಟ್ಟಕ್ಕೆ ಭೇಟಿ ನೀಡಿ ಕಾನೂನು ಬಾಹಿರವಾಗಿ ಮರಗಳ ಎಣಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತಸಂಘದ ಪ್ರಮುಖ ಜಿ.ಕೆ.ನಾಗರಾಜ ಮಾತನಾಡಿ, ಯಾವುದೇ ಕಾರಣಕ್ಕೂ ಮರಗಳ ಎಣಿಕೆ ಮಾಡುವುದು ಮತ್ತು ಕಡಿಯಲು ಬಿಡುವುದಿಲ್ಲ. ಮರಗಳಿಗೆ ಸಂಖ್ಯೆ ಹಾಕುತ್ತಿರುವ ಮತ್ತು ಕೆಐಒಸಿಎಲ್ ಸಿಬ್ಬಂದಿ ಅರಣ್ಯದಿಂದ ಹೊರಗೆ ಹೋಗುವಂತೆ ಆಗ್ರಹಿಸಿದರು. ಇದರಿಂದಾಗಿ ಸಿಬ್ಬಂದಿ ಮರಗಳ ಎಣಿಕೆ ಕಾರ್ಯ ಮೊಟಕುಗೊಳಿಸಿ ಹಿಂದಿರುಗಿದರು.

ಬಳಿಕ ಪಟ್ಟಣದಲ್ಲಿನ ಅರಣ್ಯ ಇಲಾಖೆ ಕಚೇರಿ ಭೇಟಿ ನೀಡಿ ಕೆಐಒಸಿಎಲ್ ವಿರುದ್ಧ ಆರ್‌ಎಫ್‌ಓಗೆ ದೂರು ನೀಡಲಾಯಿತು. ಜನಸಂಗ್ರಾಮ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಟಿ.ಎಂ.ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರಿ ಒಡೆತನದ ಕಂಪನಿ ವಾಮ ಮಾರ್ಗದಿಂದ ಮರಗಳ ಎಣಿಕೆ ಮಾಡುತ್ತಿರುವುದು ಸರಿಯಲ್ಲ. ಅರಣ್ಯ ಇಲಾಖೆಯ ಕಾನೂನಿಗೆ ವಿರುದ್ಧವಾಗಿ ಆರಂಭದಲ್ಲಿಯೇ ಇಂತಹ ಕೃತ್ಯದಲ್ಲಿ ತೊಡಗಿರುವ ಸಿಬ್ಬಂದಿ ಮತ್ತು ಏಜೆನ್ಸಿ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಅರಣ್ಯ ಇಲಾಖೆ ಈ ಕಂಪನಿಯೊಂದಿಗೆ ಮಾಡಿಕೊಂಡಿರುವ ಅರಣ್ಯ ತೀರುವಳಿ ಕರಾರನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಯಾವುದೇ ಕಾರಣಕ್ಕೂ ಅರಣ್ಯದಲ್ಲಿ ಲಕ್ಷಾಂತರ ಮರಗಳನ್ನ ಕಡಿದು ಹೊಸದಾಗಿ ಗಣಿಗಾರಿಕೆ ನಡೆಸಲು ಬಿಡುವುದಿಲ್ಲ. ವಾಮ ಮಾರ್ಗದಿಂದ ಬಂದು ಅರಣ್ಯದಲ್ಲಿನ ಮರಗಳಿಗೆ ಸಂಖ್ಯೆ ನಮೂದಿಸಿದರೆ ಮುಂದೆ ಸಂಭವಿಸಬಹುದಾದ ಆಗು ಹೋಗುಗಳಿಗೆ ಕಂಪನಿಯೇ ನೇರ ಹೊಣೆಯಾಗಲಿದೆ ಎಂದು ದೇವದಾರಿ ಬೆಟ್ಟದ ಕೆಳಗೆ ಇರುವ ಗ್ರಾಮಸ್ಥರು, ರೈತ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು. ರೈತ ಸಂಘದ ಅಚ್ಯುತ, ಗುರುಸಿದ್ದಪ್ಪ, ನೀಲಕಂಠ, ಕಾಡಪ್ಪ, ಧನುಂಜಯ, ಜನಸಂಗ್ರಾಮ ಪರಿಷತ್ತಿನ ಶ್ರೀಶೈಲ ಆಲ್ದಳ್ಳಿ, ಮೂಲೆಮನೆ ಈರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net