

ಸಂಡೂರು(ಬಳ್ಳಾರಿ): ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ನಾನು ಹಾಕಿದ ಸವಾಲು ಸ್ವೀಕರಿಸುವ ಧೈರ್ಯ ಅವರಲ್ಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ಹಾಗೂ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದರು. ಕಾಂಗ್ರೆಸ್ ತಾನು ಕೊಟ್ಟ ಎಲ್ಲ ಭರವಸೆಗಳನ್ನೂ ಈಡೇರಿಸುತ್ತಿದೆ. ಜನರ ಆರ್ಥಿಕ ಶಕ್ತಿ ಮತ್ತು ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ಮಾತಿನಂತೆ ನಡೆದಿದ್ದೇವೆ. ನನ್ನ ಕಟ್ಟಿ ಹಾಕಲು ಆರೋಪಗಳ ಮೂಲಕ ಬಿಜೆಪಿ ಷಡ್ಯಂತ್ರ ನಡೆಸಿತು. ಆದರೆ, ಮೂರೂ ಬೈಎಲೆಕ್ಷನ್‌ನಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ಮತದಾರರು ಆಶೀರ್ವಾದ ಮಾಡಿದ್ದಾರೆ. ಜನರ ಆಶೀರ್ವಾದ ಇರುವವರೆಗೂ ಈ ಸಿದ್ದರಾಮಯ್ಯ ಷಡ್ಯಂತ್ರ, ಸುಳ್ಳು ಕೇಸುಗಳಿಗೆ ಜಗಲ್ಲ-ಬಗ್ಗಲ್ಲ, ಹೆದರಲ್ಲ ಎಂದರು.
ವಕ್ಸ್ ವಿಚಾರದಲ್ಲೂ ಬಿಜೆಪಿ ರಾಷ್ಟ್ರೀಯ ನಾಯಕರಿಂದ ಅಪಪ್ರಚಾರ ನಡೆಯಿತು. ಮಹಾರಾಷ್ಟ್ರ ಚುನಾವಣೆಯಲ್ಲಿ 700 ಕೋಟಿ ರೂ. ಭ್ರಷ್ಟಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎನ್ನುವ ನನ್ನ ಸವಾಲು ಸ್ವೀಕರಿಸಲು ಪ್ರಧಾನಿ ಧೈರ್ಯ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.
ನಮ್ಮದು 138 ಶಾಸಕರ ಬಲ, ಗೌರಿಬಿದನೂರು, ಹರಪನಹಳ್ಳಿ ರೆಬಲ್ ಕ್ಯಾಂಡಿಡೇಟ್ ನಮ್ಮ ಜತೆಗೇ ಇದ್ದಾರೆ. ಬಿಜೆಪಿಯ ಕೆಲ ಸ್ನೇಹಿತರು ನಮ್ಮ ಜತೆಗಿದ್ದಾರೆ. 140 ಪ್ಲಸ್ ಇರುವ ನಮ್ಮ *ಸರ್ಕಾರವನ್ನು ಬಿಜೆಪಿ ಜತೆಗೆ ಸೇರಿ ಅರು ತಿಂಗಳೊಳಗೆ ಕಿತ್ತು ಹಾಗೇನೆ ಎನ್ನುವ ಎಚ್.ಡಿ.ಕುಮಾರಸ್ವಾಮಿ ಮಾತುಗಳು ಈಡೇರಲ್ಲ. | ಡಿ.ಕೆ.ಶಿವಕುಮಾರ್, ಡಿಸಿಎಂ