

ಸಂಡೂರು: ಮಾಹಿತಿ ಹಾಗೂ ಶಿಕ್ಷಣವಿದ್ದಾಗ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ತಡೆಯಲು ಸಾಧ್ಯ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಕಣಾಚಾರಿ ಹೇಳಿದರು.
ತಾಲೂಕಿನ ಚೋರುನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಇಒ, ಬಿಆರ್‌ಸಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಮತ್ತು ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯಾಗಾರ ಗುರುವಾರ ಮಾತನಾಡಿದರು.
ಸ್ಥಳೀಯ ಮುಖಂಡ ವೆಂಕಟೇಶ್ ಮಾತನಾಡಿ, ಬಾಲ್ಯದಲ್ಲಿ ಮದುವೆಯಾದರೆ ಮಕ್ಕಳು ಅಂಗ ವೈಫಲ್ಯದಿಂದ ಜನಿಸಲಿದ್ದಾರೆ. ಹಾಗಾಗಿ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ವೈದ್ಯಾಧಿಕಾರಿ ಅಕ್ಷಯ್ ಶಿವಪುರ ಅವರು ಚೋರನೂರು ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ ನಡೆದ ಬಾಲ್ಯ ವಿವಾಹ, ಬಾಲ್ಯ ಗರ್ಭಿಣಿಯರು, ಬಾಲ ಕಾರ್ಮಿಕರಿಗೆ ಆಗಿರುವ ದುಷ್ಪರಿಣಾಮ ಕುರಿತು ವಿವರಿಸಿದರು.
ಜಿಲ್ಲಾ ಮಕ್ಕಳ ಸಹಾಯ ಅಧಿಕಾರಿಗಳಾದ ಆನಂದಪ್ಪ, ಹೊನ್ನುರಪ್ಪ, ಚನ್ನಬಸಪ್ಪ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷರಾದ ಕರಿಬಸಪ್ಪ, ಪರಮೇಶ್ವರಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಜಕಣಾಚಾರಿ, ಶಿಕ್ಷಣ ಸಂಯೋಜಕ ಪಾಲಾಕ್ಷಪ್ಪ, ನೋಡಲ್ ಅಧಿಕಾರಿ ಮಂಜುನಾಥ್ ಆದಿಮನೆ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಬಸವರಾಜ್, ಗ್ರಾಪಂ ಪಿಡಿಒ ಕರಿಬಸವರಾಜ್, ಶಿಶು ಯೋಜನಾ ಅಧಿಕಾರಿ ಶಾರದಾ ಶಿಂಧೆ, ಸಿಆರ್‌ಪಿ ರಮೇಶ್, ಜನಪದ ಕಲಾವಿದ ಲೋಕೇಶ್ ಜಾಗೃತಿ ಗೀತೆಗಳನ್ನು ಹಾಡಿದರು. ರಮೇಶ್, ಪ್ರೌಢಶಾಲಾ ಮುಖ್ಯಶಿಕ್ಷಕ ಮಧು ನಿರ್ವಹಿಸಿದರು.