

ಸಂಡೂರು: ತಾಲೂಕಿನ ಚಿಕ್ಕಂತಾಪುರ ಬಳಿಯ ಪದ್ಮಾವತಿ ಎ-1 ಕಾರ್ಖಾನೆ ಹೊರ ಸೂಸುತ್ತಿರುವ ಕಲುಷಿತ ಹೊಗೆಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ (ಪ್ರೊ.ಕೃಷ್ಣಪ್ಪ ಸ್ಥಾಪಿತ)ಡಿಎಸ್‌ಎಸ್ ಮುಖಂಡರು, ಸ್ಥಳಿಯ ರೈತರು ಬುಧವಾರ ತಹಸೀಲ್ದಾರ್ ಅನಿಲ್‌ಕುಮಾರಗೆ ಮನವಿ ಸಲ್ಲಿಸಿದರು.
ಡಿಎಸ್‌ಎಸ್ ಮಾಜಿ ಸಂಚಾಲಕ ರಾಮಕೃಷ್ಣ ಹೆಗಡೆ ಮಾತನಾಡಿ, ಪದ್ಮಾವತಿ ಎ-1 ಕಾರ್ಖಾನೆಯು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ನೀಡಿಲ್ಲ. ತನ್ನ ಕೈಗಾರಿಕಾ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿಲ್ಲ. ಸಿಎಸ್‌ಆರ್ ಚಟುವಟಿಕೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ, ಶೈಕ್ಷಣಿಕ, ಸಾಮಾಜಿಕ ಸಮಸ್ಯೆ ನಿವಾರಿಸುತ್ತಿಲ್ಲ.
ಕಾರ್ಮಿಕರಿಗೆ ಕನಿಷ್ಟ ಸುರಕ್ಷತೆಯಿಲ್ಲ, ಸರ್ಕಾರದ ಪರವಾನಿಗೆ ಪಡೆಯದೆ ಹಳ್ಳದ ನೀರನ್ನು ಉಪಯೋಗಿಸಲಾಗುತ್ತಿದೆ. ಕಾರ್ಖಾನೆ ಸ್ಥಾಪನೆಯಾಗಿ 25ಕ್ಕೂ ಹೆಚ್ಚು ವರ್ಷಗಳಾಗಿದ್ದು, ಇದುವರೆಗೂ ಒಂದು ಆರೋಗ್ಯ ಶಿಬಿರ ಸಹ ಮಾಡಿಲ್ಲ ಎಂದರು.
ತಾಲೂಕು ಡಿಎಸ್‌ಎಸ್ ಸಂಚಾಲಕ ಎಚ್.ಹನುಮಂತರೆಡ್ಡಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಮರಿಸ್ವಾಮಿ, ಮಲ್ಲೇಶ ಕಮ್ಮತ್ತೂರು, ವೈಟಿಜಿ ಕುಮಾರ್, ಸುಬ್ಬಣ್ಣ, ಗಣೇಶ ಹೆಗಡೆ, ಬಸವರಾಜ ಬ್ರೂಸ್ಲಿ, ತಾರಾನಗರ ತಿಮ್ಮಪ್ಪ, ಹೊಸಳ್ಳಿ ಗಂಗಪ್ಪ ಇತರರಿದ್ದರು.