

ಸಂಡೂರು: ಪಟ್ಟಣದಲ್ಲಿ ನಾಡಿನ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿಯನ್ನು ಮೇ 31 ರಂದು ಆಚರಿಸಲಾಗುವುದು ಎಂದು ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪಿ.ರವಿಕುಮಾರ್ ಹೇಳಿದರು.
ತಾಲೂಕು ವೀರಶೈವ ಲಿಂಗಾಯತ ಸಮಾಜದ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು. ಮೇ 31ರಂದು ತಾಲೂಕು ಕಚೇರಿ ಬಳಿಯಿರುವ ಗಣೇಶ ಗುಡಿಯಿಂದ ಆದರ್ಶ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಸಲಾಗುವುದು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿರಕ್ತಮಠದ ಪ್ರಭುಸ್ವಾಮೀಜಿ, ಹರಪನಹಳ್ಳಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸ್ಮಯೋರ್ ಎಂಡಿ ಬಹಿರ್ಜಿ ಘೋರ್ಪಡೆ ಕಾರ್ಯಕ್ರಮ ಉದ್ಘಾಟಿಸುವರು ಎಂದು ತಿಳಿಸಿದರು.
ಸಮುದಾಯದ ಪ್ರಮುಖ, ವೆಸ್ಕೊ ಕಂಪನಿ ಮುಖ್ಯಸ್ಥ ಕೆ.ಎಸ್.ನಾಗರಾಜ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಈ.ತುಕಾರಾಮ್, ಬಿಕೆಜಿ ಸಂಸ್ಥೆ ಮಾಲೀಕ ಬಿ.ನಾಗನಗೌಡ ಪಾಲ್ಗೊಳ್ಳುವರು. ಸಂಜೆ ಕಾರ್ಯಕ್ರಮವನ್ನು ಯಶವಂತನಗರದ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕಿ ಅನ್ನಪೂರ್ಣ ತುಕಾರಾಮ್ ಉದ್ಘಾಟಿಸುವರು. ತಾಲೂಕು ವೀರಶೈವ ಸಂಘದ ಉಪಾಧ್ಯಕ್ಷ ಗಡಂಭ್ಲಿ ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಘದ ಗೌರವ ಅಧ್ಯಕ್ಷ ಚಿತ್ರಿಕಿ ಸತೀಶ್ ಕುಮಾರ್, ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ಗುಡೇಕೋಟೆ ನಾಗರಾಜ ಆಗಮಿಸುವರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶಿಸಲಾಗುವುದು ಎಂದರು.
ಸಂಘದ ತಾಲೂಕು ಉಪಾಧ್ಯಕ್ಷ ರಾಜಾಪುರ ರಮೇಶ್, ಕಾರ್ಯದರ್ಶಿ ಶ್ರೀಕಾಂತ್ ಹಿರೇಮಠ, ಸಹ ಕಾರ್ಯದರ್ಶಿ ಸಿದ್ದೇಶ್, ಖಜಾಂಚಿ ಮೇಟಿ ಭುವನೇಶ, ಗೌರವ ಅಧ್ಯಕ್ಷ ಮೇಟಿ ಶಂಕ್ರಪ್ಪ, ಸೋವೇನಹಳ್ಳಿ ಮಲ್ಲಿಕಾರ್ಜುನ ಸ್ವಾಮಿ, ಜಿಲೇಬಿ ವೀರೇಶ್, ಜಿ.ಏಕಾಂಬ್ರಪ್ಪ, ಹುಬ್ಬಲಗಂಡಿ ಈಶನ್ನ, ಬಿ.ಕೆ.ಬಸವರಾಜ್, ಮೂಲೆಮನೆ ತಿಪ್ಪೆಸ್ವಾಮಿ, ಕಿನ್ನೂರೇಶ್ವರ, ಬಿ.ಎಂ.ಉಜ್ಜಿನಯ್ಯ ಇದ್ದರು.