ರಿಲ್ಯಾಕ್ಸ್ ಮೂಡ್‌ನಲ್ಲಿ ಅಭ್ಯರ್ಥಿಗಳು

Untitled design(22)
ಸಂಡೂರಿನ ಮನೆಯಲ್ಲಿ ಗುರುವಾರ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಚರ್ಚಿಸಿದರು. ಕೂಡ್ಲಿಗಿಯ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು.
Published on

ಸಂಡೂರು: ಸಂಡೂರು ಉಪಚುನಾವಣೆಯ ಮತದಾನ ಮುಗಿದಿದ್ದು, ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ.

ಉಪಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹಾಗೂ ಕಾಂಗ್ರೆಸ್‌ನಿಂದ ಸಂಸದ ತುಕಾರಾಮ್ ಪತ್ನಿ ಅನ್ನಪೂರ್ಣ ತುಕಾರಾಮ್ ಕಣಕ್ಕಿಳಿದರು. ನಾಮಪತ್ರ ಸಲ್ಲಿಕೆ ಬಳಿಕ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಗಲು-ರಾತ್ರಿ ಎನ್ನದೆ ಕ್ಷೇತ್ರದಲ್ಲಿ ಸುತ್ತಾಡಿ ಮತಯಾಚಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು ಹಾಗೂ ಬಿಜೆಪಿ ಹುರಿಯಾಳು ಬಂಗಾರು ಹನುಮಂತು ಪರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಪ್ರಲ್ಹಾದ ಜೋಶಿ, ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿ ಘಟಾನುಘಟಿಗಳೊಂದಿಗೆ ಪ್ರಚಾರ ನಡೆಸಿದ್ದಾರೆ. ಕೊನೆಯ ದಿನವೂ ಮನೆಮನೆಗೆ ತೆರಳಿ ಮತ ಭೀಕ್ಷೆ ಬೇಡಿರುವ ಹುರಿಯಾಗಳ ಭವಿಷ್ಯ ಬುಧವಾರ ಮತಯಂತ್ರ ಸೇರಿದೆ. ಅಂದಾಜು 15 ದಿನಗಳ ಪಟ್ಟಣ, ಹಳ್ಳಿ, ಓಣಿಗಳನ್ನು ಸುತ್ತಾಡಿ ಸುಸ್ತಾಗಿರುವ ಅಭ್ಯರ್ಥಿಗಳು ಮತದಾನ ಬಳಿಕ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಗುರುವಾರ ಮನೆಯಲ್ಲಿದ್ದು ಕಾಲ ಕಳೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಕುಟುಂಬದವರೊಂದಿಗೆ ಸಂತಸದ ಕ್ಷಣಗಳು ಕಳೆದರು. ಅಲ್ಲದೆ ಕಾರ್ಯಕರ್ತರೊಂದಿಗೆ ಸೋಲು ಗೆಲುವಿನ ಲೆಕ್ಕಾಚಾರದ ಬಗ್ಗೆಯೂ ಮಾತುಕತೆ ನಡೆಸಿದರು. ಟಿವಿ ವೀಕ್ಷಿಸುವುದಲ್ಲದೆ ಪ್ರೀತಿಯ ನಾಯಿಯೊಂದಿಗೆ ಸಮಯ ಕಳೆದರು.

ಇನ್ನೂ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಕೂಡ್ಲಿಗಿಯ ತಮ್ಮ ಸ್ವಂತ ಮನೆಯಲ್ಲಿ ಬೆಳಗ್ಗೆ ದಿನಪತ್ರಿಕೆಯಲ್ಲಿ ಬಂದ ಮತದಾನ ಸುದ್ದಿ ಓದುವ ಮೂಲಕ ದಿನ ಆರಂಭಿಸಿದರು. ನಂತರ ಈಜುಕೊಳದಲ್ಲಿ ಈಜಾಡಿ ದಣಿವಾರಿಸಿಕೊಂಡರು. ಅಲ್ಲದೆ ಕಾರ್ಯಕರ್ತರೊಂದಿಗೆ ಯಾವ ಬೂತ್‌ಗಳಲ್ಲಿ ಎಷ್ಟು ಮತದಾನವಾಗಿದೆ ಎಂಬುದು ಸೇರಿ ಇತರ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಎರಡೂ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಮತದಾರರು ನೀಡಿದ ಫಲಿತಾಂಶ ನ.23ರಂದು ಪ್ರಕಟವಾಗಲಿದ್ದು, ಯಾರಿಗೆ ಜಯದ ಮಾಲೆ ಬೀಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net