

ಸಂಡೂರು: ಸಂಡೂರು ಪುರಸಭೆ ಕೈವಶವಾಗಿದೆ. ನೂತನ ಅಧ್ಯಕ್ಷರಾಗಿ ಅನಿತಾ ವಸಂತಕುಮಾರ್, ಉಪಾಧ್ಯಕ್ಷರಾಗಿ ವೀರೇಶ ಸಿಂಧೆ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ (ತಹಸೀಲ್ದಾರ್) ಎಚ್.ಜೆ.ರಶ್ಮಿ ಬುಧವಾರ ಘೋಷಿಸಿದರು. ಪಟ್ಟಣದ ಪುರಸಭೆಯ ಕೆ.ಎಸ್.ವೀರಭದ್ರಪ್ಪ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನ ಎಸ್ಟಿ-ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. 23ಸದಸ್ಯ ಬಲದ ಸಂಡೂರು ಪುರಸಭೆಗೆ 2019ರ ಮೇ 31ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 10 ಸ್ಥಾನ ಪಡೆದರೆ ಒಂದು ಸ್ಥಾನ ಪಕ್ಷೇತರ ಪಾಲಾಗಿತ್ತು. ಮೂರು ಬಾರಿ ಮೀಸಲು ಬದಲಾವಣೆಯಿಂದಾಗಿ ಆಯ್ಕೆಯಾಗಿ 17ತಿಂಗಳ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು. ನಂತರ ಕಾಂಗ್ರೆಸ್ 12, ಬಿಜೆಪಿಯ 10 ಮತ್ತು ಪಕ್ಷೇತರರೊಬ್ಬರು ಸೇರಿ ಎಲ್ಲ ಸದಸ್ಯರು ಹಾಜರಿದ್ದು ಅಧಿಕಾರ ಸ್ವೀಕರಿಸಿದರು.
ಸಭಾಂಗಣಕ್ಕೆ ಆಗಮಿಸಿದ ಶಾಸಕ ಇ.ತುಕಾರಾಮ್ ಮಾತನಾಡಿ, ಚುನಾವಣೆ ವೇಳೆ ಮಾತ್ರ ಪಕ್ಷ ರಾಜಕಾರಣ ಈಗಿನಿಂದ ಪಟ್ಟಣದ 23ವಾರ್ಡ್‌ಗಳ ಅಭಿವೃದ್ಧಿಗೆ ಪಕ್ಷಬೇಧ ಮರೆತು ಶ್ರಮಿಸಬೇಕು ಎಂದು ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಚುನಾವಣಾಧಿಕಾರಿ ಎಚ್.ಜೆ.ರಶ್ಮಿ, ಉಪ ತಹಸೀಲ್ದಾರ್ ಸುಬ್ಬರಾವ್ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ಇಮಾಂ ಸಾಹೇಬ್, ವ್ಯವಸ್ಥಾಪಕ ಖಾಜಾ ಮೊಯಿನುದ್ದೀನ್, ಸಮುದಾಯ ಅಭಿವೃದ್ಧಿ ಅಧಿಕಾರಿ ಹಗರಿ ಪ್ರಭುರಾಜ್, ಪ್ರಭಾರ ಆರ್‌ಐ ಕುಮಾರನಾಯ್ಕ, ಮತ್ತು ಸಿಬ್ಬಂದಿ ಇದ್ದರು.
ಯುವ ಮುಖಂಡ ವಿಶ್ವಾಸ್‌ಲಾಡ್‌ರನ್ನು ಹೊತ್ತು ಕಾಂಗ್ರೆಸ್ ಪರ ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಿಸಿದರು. ಜಿಪಂ ಸದಸ್ಯ ಅಕ್ಷಯ ಲಾಡ್, ಗ್ರಾಮೀಣ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಿತ್ರಿಕಿ ಸತೀಶ್, ಜಿ.ಏಕಾಂಬ್ರಪ್ಪ, ಉಪಾಧ್ಯಕ್ಷ ಕೆ.ನೂರ್‌ಮಹ್ಮದ್ ಹಾಗೂ ಪುರಸಭೆ ಸದಸ್ಯರಿದ್ದರು.