

ಸಂಡೂರು: ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಮಾಸ್ಕ್ ಧರಿಸದೆ ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಡೂರು, ಗಾದಿಗನೂರು, ತೋರಣಗಲ್ ಪಿಎಸ್‌ಐಗಳಿಗೆ ಡಿಸಿ ಪವನ್‌ಕುಮಾರ್ ಮಾಲಪಾಟಿ ಸೂಚನೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಶಾಸಕ ಇ.ತುಕಾರಾಮ್ ಮಾತನಾಡಿ, 3ನೇ ಅಲೆ ಕುರಿತು ತಜ್ಞರು ನೀಡಿದ ಸಲಹೆ ಆಧರಿಸಿ 18 ವರ್ಷದೊಳಗಿನ ಮಕ್ಕಳ ಬಗ್ಗೆ ನಿಗಾವಹಿಸಬೇಕು. ಕರೊನಾ ಕಾಣಿಸಿಕೊಂಡಲ್ಲಿ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಭಾರ ಟಿಎಚ್‌ಒ ಕುಶಾಲರಾಜ್, ಸ್ಥಳೀಯ ಆಸ್ಪತ್ರೆ ಸಿಎಂಒ ಡಾ.ರಾಮಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ 5 ಸಾವಿರಕ್ಕೂ ಅಧಿಕ ಸೋಂಕು ಕಾಣಿಸಿಕೊಂಡಿದ್ದವು. ಇದೀಗ 534 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 49 ಜನ ಮೃತಪಟ್ಟಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಹೆಚ್ಚಿಸುವ ಜತೆಗೆ ಸಿಬ್ಬಂದಿ ಕೊರತೆ ನೀಗಿಸಬೇಕು ಎಂದರು.
ಶಾಸಕ ಪ್ರತಿಕ್ರಿಯಿಸಿ, ಜಿಂದಾಲ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರನ್ನು ನೇಮಕ ಮಾಡಿಕೊಂಡರೆ, ಸ್ಥಳೀಯರಿಗೆ ಉದ್ಯೋಗ ಒದಗಿಸಿದಂತಾಗುತ್ತದೆ. ಶಾಸಕರ ಅನುದಾನ 50 ಲಕ್ಷ ರೂ. ಗಳಲ್ಲಿ ಬಟ್ಟೆ ಖರೀದಿಸಿ ಡಿಎಂಎಫ್‌ನಡಿ ಹೊಲಿಗೆ ತರಬೇತಿ ಪಡೆದ ಮಹಿಳೆಯರ ಮೂಲಕ ಮಾಸ್ಕ್ ಹೊಲಿಸಿ ವಿತರಿಸಲಾಗುವುದು ಎಂದರು.
ಡಿಸಿ ಮಾಲಪಾಟಿ ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮುಂದಿನ ದಿನದಲ್ಲಿ ಆಕ್ಸಿಜನ್ ಉತ್ಪಾದನೆ ಘಟಕ ಆರಂಭಿಸಲಾಗುವುದು. ಸದ್ಯಕ್ಕೆ ಡೂರಾ ಸಿಲಿಂಡರ್ ವ್ಯವಸ್ಥೆ ಮಾಡಲಾಗುವುದು. ಸಿಬ್ಬಂದಿ ಕೊರತೆ, ಮಾಸ್ಕ್, ಸ್ಯಾನಿಟೈಸರ್ ಸೇರಿ ಅಗತ್ಯ ಬೇಡಿಕೆಗಳನ್ನು ಸಲ್ಲಿಸಿದಲ್ಲಿ ಕೂಡಲೇ ಈಡೇರಿಸಲಾಗುವುದು ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಇಮಾಮ್‌ಸಾಹೇಬ್, ಉಪಾಧ್ಯಕ್ಷ ವೀರೇಶ ಸಿಂಧೆ, ಮುಖಂಡ ಬಿ.ವಸಂತಕುಮಾರ್ ಇತರರಿದ್ದರು.