ಬಿಜೆಪಿ ತೊರೆಯಲು ಸಂದೇಶ್ ನಾಗರಾಜ್ ನಿರ್ಧಾರ

Sandesh Nagaraj - Final
Published on

ಮೈಸೂರು: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನಂತರ ಬಿಜೆಪಿಯ ಮತ್ತೊಬ್ಬ ಮುಖಂಡರಾದ ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಬಿಜೆಪಿ ತೊರೆಯಲು ಮುಂದಾಗಿದ್ದಾರೆ.


ಈ ಸಂಬಂಧ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾನು ಸಕ್ರಿಯನಾಗಿಲ್ಲ. ಅಕ್ರಮವಾಗಿದ್ದೇನೆ. ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರಾಗಿದ್ದಾರೆ. ಮೋಸ ಮಾಡುವುದರಲ್ಲಿ ಬಿಜೆಪಿಯವರು ನಂಬರ್ ಓನ್ ಎಂದು ಟೀಕಿಸಿದ್ದಾರೆ.


ಬಿಜೆಪಿ ಸಹವಾಸ ನನಗೆ ಇನ್ನೂ ಸಾಕು. ಬಿಜೆಪಿ ನಾಯಕರು ಎಚ್.ವಿಶ್ವನಾಥ್‌ಗೆ ಅನ್ಯಾಯ ಮಾಡಿದರು. ನನಗೂ ಅನ್ಯಾಯ ಮಾಡಿದರು ಎಂದು ಬೇಸರ ಹೊರಹಾಕಿದ್ದಾರೆ.


ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ನಿರ್ಧರಿಸಿರುವುದಾಗಿ ಹೇಳಿದ ಅವರು, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಯೂ ಮಾತನಾಡುತ್ತೇನೆ ಎಂದರು.
ಬಿಜೆಪಿಯವರು ಯಡಿಯೂರಪ್ಪ ಅವರನ್ನು ಒಳ್ಳೆತನದಲ್ಲಿ ಮುಗಿಸಿದರು. ಈಗ ವಿಜಯೇಂದ್ರನನ್ನು ವರುಣಕ್ಕೆ ತರುವ ಮೂಲಕ ಅವರನ್ನು ಮುಗಿಸಲು ಹೊರಟಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಬಿಜೆಪಿ ನಾಯಕರಲ್ಲಿದೆ ಎಂದು ವ್ಯಂಗ್ಯವಾಡಿದರು.
ವಿಜಯೇಂದ್ರನನ್ನು ಬಲಿ ಕೊಡಲು ವರುಣ ಕ್ಷೇತ್ರಕ್ಕೆ ಕರೆ ತರುತ್ತಿದ್ದಾರೆ. ವಿಜಯೇಂದ್ರಗೆ ರಾಜಕೀಯ ಭವಿಷ್ಯ ಚೆನ್ನಾಗಿ ಇರಬೇಕಾದರೆ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಲಿ ಎಂದ ಅವರು, ಬಿಜೆಪಿಯ 10ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್‌ಗೆ ಹೋಗಲು ಮುಂದಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net