ಶೌಚಗೃಹದ ಮಹತ್ವ ಸಾರುವ ಚಿತ್ರ ಸಂಡಾಸ್

sandas movie
Published on

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಡಾ.ವಿನೋದ್ ಕುಮಾರ ಬಣ್ಣನೆ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಮನುಷ್ಯನ ಆರೋಗ್ಯಕ್ಕೆ ಶೌಚ ಕ್ರಿಯೆ ನೈಸರ್ಗಿಕವಾಗಿ ದೇವರು ಕೊಟ್ಟ ಪ್ರಕ್ರಿಯೆ. ಆದರೆ, ದೇಹಬಾಧೆ ತೀರಿಸಿಕೊಳ್ಳಲು ಸೂಕ್ತ ಸ್ಥಳದ ವ್ಯವಸ್ಥೆ ಅತ್ಯವಶ್ಯವಾಗಿದ್ದು, ಈ ಬಗ್ಗೆ ಸಂಡಾಸ್ ಚಿತ್ರದಲ್ಲಿ ಗಮನ ಸೆಳೆಯಲಾಗಿದೆ ಎಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಡಾ.ವಿನೋದ್ ಕುಮಾರ ಗೌಡ ಹೇಳಿದರು.
ವೆಂಕಟಗಿರಿಕೋಟೆ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಡಾಸ್ ಚಲನಚಿತ್ರದ ಉಚಿತ ವೀಕ್ಷಣೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಉತ್ತರ ಕರ್ನಾಟಕದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುವ ಸ್ವಚ್ಛತೆ ಮತ್ತು ಶೌಚಗೃಹ ಸಮಸ್ಯೆಗಳ ನೈಜ ಘಟನೆ ಆಧಾರಿತ ಸಾಮಾಜಿಕ ಕಳಕಳಿಯ ಚಲನಚಿತ್ರವನ್ನು ನಮ್ಮ ತಾಲೂಕಿನವರೇ ನಿರ್ಮಿಸಿ, ನಿರ್ದೇಶಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಶೌಚ ವ್ಯವಸ್ಥೆಯ ಮಹತ್ವದ ಬಗ್ಗೆ ಉತ್ತರ ಕರ್ನಾಟಕದ ಶಾಲಾ ಬಾಲಕಿಯೊಬ್ಬಳು ಧ್ವನಿ ಎತ್ತಿ, ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವಂತೆ ಮಾಡಿದ್ದು, ತನ್ನ ಮನೆಗೂ ಮತ್ತು ಗ್ರಾಮಕ್ಕೂ ಶೌಚಗೃಹ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಆ ನೈಜ ಘಟನೆಯ ತಿರುಳನ್ನು ಸಿನಿಮಾ ರೂಪದಲ್ಲಿ ಮಾಡಿ, ವಿಶ್ವದ ಹಲವೆಡೆ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ ಎಂದರು.
ಬೆಳ್ಳಿ ಪರದೆ ಮೇಲೆ ತೆರೆ ಕಾಣದ ಈ ಚಿತ್ರವನ್ನು ಶಾಲಾ ಮಕ್ಕಳಿಗೆ ತೋರಿಸಲು ನಿರ್ಮಾಪಕ ದೇವನಹಳ್ಳಿ ದೇವರಾಜ್ ಮುಂದಾಗಿದ್ದಾರೆ. ಅದಕ್ಕೆ ಸಹಕಾರ ಕೋರಿದ್ದರಿಂದ ಅವರ ಈ ಸಾಮಾಜಿಕ ಕಳಕಳಿಯ ಕೆಲಸಕ್ಕೆ ರೈತ ಸಂಘ ಕೈಜೋಡಿಸಿದೆ ಎಂದರು.

ನಿರ್ಮಾಪಕ, ನಿರ್ದೇಶಕ ಡಾ.ದೇವನಹಳ್ಳಿ ದೇವರಾಜ್ ಮಾತನಾಡಿ, ನಮ್ಮ ಸಂಡಾಸ್ ಸಿನಿಮಾ ಬಿಡುಗಡೆಗೂ ಮುನ್ನ 290 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳು ವೀಕ್ಷಿಸಬೇಕೆಂಬ ಮಹದಾಸೆಯಿಂದ ಇದುವರೆಗೂ 20 ಶಾಲೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು ಎಂದರು.
ಶಾಲೆಯಲ್ಲಿ ಮಕ್ಕಳು ಚಿತ್ರ ವೀಕ್ಷಸಲು ರೈತ ಸಂಘದವರು ಕೈಜೋಡಿಸಿದರು. ಜತೆಗೆ ವಿನೋದ್ ಕುಮಾರಗೌಡ ನಮ್ಮ ತಂಡ ವಿದೇಶದಲ್ಲಿ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ನೆರವು ನೀಡಿದ್ದರು. ಹಾಗೆಯೇ ದೇವನಹಳ್ಳಿಯ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಪ್ರತಿಫಲಾಪೇಕ್ಷೆಯಿಲ್ಲದೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಕೊಡಿಸುತ್ತಿದ್ದಾರೆ ಎಂದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಎಂ.ನಾರಾಯಣಸ್ವಾಮಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಿ, ಅವರ ಸಾಮಾನ್ಯ ಜ್ಞಾನ ವೃದ್ಧಿಸಲು ಇಂತಹ ಸಾಮಾಜಿಕ ಕಳಕಳಿಯ ಚಿತ್ರಗಳ ಪ್ರದರ್ಶನ ಅಗತ್ಯವಿದೆ ಎಂದರು.
ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಹೂಡಿ ಮುನಿರಾಜು, ರೈತ ಸಂಘದ ತಾಲೂಕು ಅಧ್ಯಕ್ಷ ಜಯಶಂಕರ್, ತಾಲೂಕು ಸಂಘಟನಾ ಕಾರ್ಯದರ್ಶಿ ನಾಸೀರ್ ಅಹಮದ್, ತಾಲೂಕು ಯುವ ಘಟಕದ ಅಧ್ಯಕ್ಷ ಚೇತನಗೌಡ, ಕಸಬಾ ಹೋಬಳಿ ಅಧ್ಯಕ್ಷ ವೆಂಕಟೇಶ್, ವಿಜಯಪುರ ಹೋಬಳಿಯ ಅಧ್ಯಕ್ಷ ನಸೃಲ್ಲಾ, ಜನಪದ ಕಲಾವಿದ ಮುನಿರಾಜು, ಶಿಕ್ಷಕ ನಾಗರಾಜ್, ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ನಟರಾಜ್, ಸಹ ನಿರ್ದೇಶಕಿ ದೀಪಿಕಾ ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net