

ಮೈಸೂರು: ಶಿರಸಿಯಿಂದ ಮೈಸೂರಿಗೆ ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳ ಸಿಬ್ಬಂದಿ ಬುಧವಾರ ಮಾಲು ಸಹಿತ ಬಂಧಿಸಿದ್ದಾರೆ.
ಶಿರಸಿ ನಿವಾಸಿಗಳಾದ ರಾಘವೇಂದ್ರ ಗುಡಿಗಾರ್, ಸೊರಬ ತಾಲೂಕಿನ ತವನಂದಿ ನಿವಾಸಿ ಸಚಿನ್ ಎಂ. ಗುಡಿಗಾರ್, ಮೈಸೂರು ಮಂಡಿ ಮೊಹಲ್ಲಾ ನಿವಾಸಿ ನಾರಾಯಣ ಬಂಧಿತ ಆರೋಪಿಗಳು. ಸಿರಸಿಯಿಂದ ಕಾರಿನಲ್ಲಿ 308 ಕೆ.ಜಿ. ತೂಕದ ಗಂಧದ ಮರದ ತುಂಡುಗಳನ್ನು ಮೈಸೂರಿಗೆ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ರೆಡ್ಡಿ, ಮಡಿಕೇರಿಯ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಎಂ.ಎಸ್. ಕಾಶಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೈಸೂರು ಅರಣ್ಯ ಸಂಚಾರಿ ದಳದ ಪಿಎಸ್‌ಐ ಲಕ್ಷ್ಮೀ, ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿಜಯರಾಜು, ಸಾಗರ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ, ಸಕಲೇಶಪುರ ಅರಣ್ಯ ಸಂಚಾರಿ ದಳದ ಪಿಎಸ್‌ಐ ಸ್ವಾಮಿ, ಮೈಸೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಜಹೋರ್ ಅಹಮದ್, ಹೇಮರಾಜು, ಕೃಷ್ಣೇಗೌಡ, ಅರುಣ್ ಭಾಗವಹಿಸಿದ್ದರು.