ದೇವದುರ್ಗ: ಪಟ್ಟಣ ವ್ಯಾಪ್ತಿಯ ಚಂದನಕೆರೆ ವಾರ್ಡ್‌ನಲ್ಲಿರುವ ಕೆರೆ ಹಿನ್ನೀರಿನಿಂದ ರೈತರ ಜಮೀನು ಜಲಾವೃತಗೊಂಡಿದ್ದು, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಸಂತ್ರಸ್ತ ರೈತರು ಮಂಗಳವಾರ ಮನವಿ ಸಲ್ಲಿಸಿದರು.
ಹಲವು ವರ್ಷಗಳಿಂದ ಚಂದನಕೆರೆ ಸುತ್ತ ಹಲವು ರೈತರು ತಮ್ಮ ಜಮೀನಿನಲ್ಲಿ ಒಕ್ಕಲುತನ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಬಲದಂಡೆ ನಾಲೆ ನೀರು ರೈತರು ಬಳಸಿದ ನಂತರ ಕೆರೆಗೆ ಬಂದು ಸೇರುತ್ತಿದೆ. ಇದರಿಂದ ಹಲವು ರೈತರ ಜಮೀನು ಮುಳುಗಡೆಯಾಗಿವೆ. ಅಲ್ಲದೆ ನಾಲೆ ನೀರು ಎಲ್ಲೆಂದರಲ್ಲಿ ಸೋರಿಕೆಯಾಗಿ ಕೆರೆ ಅಕ್ಕಪಕ್ಕದ ರೈತರ ಜಮೀನಿನಲ್ಲಿ ನೀರು ನಿಲ್ಲುತ್ತಿವೆ. ಇದರಿಂದ ಕೃಷಿ ಮಾಡಲು ಬಾರದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ರೈತರಿಗೆ ಬೆಳೆಯೂ ಬರುತ್ತಿಲ್ಲ, ಪರಿಹಾರವೂ ಸಿಗುತ್ತಿಲ್ಲ ಎಂದು ದೂರಿದರು.
ಕೂಡಲೇ ರೈತರ ಜಮೀನಿನಲ್ಲಿ ನಿಲ್ಲುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲವೆ ಸರ್ಕಾರ ಮಾನದಂಡ ಪ್ರಕಾರ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ವಕೀಲ ಬಸವರಾಜ ವಿ.ಎನ್., ರೈತರಾದ ಬಸವರೆಡ್ಡಿ, ತಿಮ್ಮನಗೌಡ, ಗುಂಡಯ್ಯ, ವೆಂಕೋಬ, ತಿಮ್ಮವ್ವ, ಬಸ್ಸಮ್ಮ, ಮಲ್ಲಮ್ಮ ಇತರರಿದ್ದರು.