

ಮಂಡ್ಯ: ಹಸಿರು ಬೆಳೆಸುವ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡಲು ಎಲ್ಲರೂ ಮುಂದಾಗಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಅಮರ ನಾರಾಯಣ ಹೇಳಿದರು.
ತಾಲೂಕಿನ ಕಿರಗಂದೂರು ಗ್ರಾಮದ ಮಾದರಿ ರೈತ ಕೆ.ಪಿ.ಸಿದ್ದರಾಜು ಅವರ ತೋಟದಲ್ಲಿ ಸಂಘದಿಂದ ಹಮ್ಮಿಕೊಂಡಿದ್ದ ಶ್ರೀಗಂಧ ಬೆಳೆಗಾರರ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಮಾನದಲ್ಲಿ ಶ್ರೀಗಂಧ ಬೆಳೆ ರೈತರಿಗೆ ವರದಾನವಾಗಿದ್ದು, ಆರ್ಥಿಕವಾಗಿ ರೈತರು ಸಬಲರಾಗಲು ಸಹಕಾರಿಯಾಗಿದೆ. ಶ್ರೀಗಂಧ ಬೆಳೆ ಬೆಳೆಗಾರರಿಗೆ ಸಾಲ ಸೌಲಭ್ಯ ಸೇರಿ ಇನ್ನಿತರ ನೆರವು ದೊರೆಯುತ್ತಿದ್ದು, ರೈತರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಯು.ಶರಣಪ್ಪ, ಜಿಲ್ಲಾಧ್ಯಕ್ಷ ನಾಗಣ್ಣ, ಕಾರ್ಯದರ್ಶಿ ಶ್ರೀಪಾದ ಆಚಾರ್ಯ, ಮದ್ದೂರು ತಾಲೂಕು ಘಟಕದ ಕಾರ್ಯದರ್ಶಿ ಎಂ.ಕೆ.ದೇವರಾಜ್ ಮತ್ತಿತರರಿದ್ದರು.
ನೂರಾರು ಮಂದಿ ಭಾಗಿ: ವಿವಿಧ ಜಿಲ್ಲೆಗಳಿಂದ ನೂರಾರು ಶ್ರೀಗಂಧ ಬೆಳೆಗಾರರು ಹಾಗೂ ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಂಧ ಬೆಳೆಯ ಬಗ್ಗೆ ವಿಚಾರ ವಿನಿಯಮ ಮಾಡಿಕೊಂಡರು. ಹಸಿರು ಬೆಳೆಸುವ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡುವುದು ಹಾಗೂ ಕಾರ್ಬನ್ ಕ್ರೆಡಿಟ್ ಯೋಜನೆ ಮತ್ತು ಇದರಿಂದ ರೈತರಿಗೆ ದೊರಕುವ ಲಾಭಗಳ ಬಗ್ಗೆ ಮಾಹಿತಿ ನೀಡಲಾಯಿತು.