

ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿರುವಾಗ ಪೊಲೀಸರಿಂದಲೇ ಫೋನ್ ಪಡೆದುಕೊಂಡು ತನ್ನ ಲವರ್‌ಗೆ ‘ಲವ್ ಆ್ಯನಿವರ್ಸರಿ ಶುಭಾಶಯ’ ತಿಳಿಸಿ ಸುದ್ದಿಯಾಗಿರುವ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ಆರೋಪಿ ವೈಭವ್ ಜೈನ್‌ನ ಡ್ರಗ್ಸ್ ವ್ಯಸನದ ಮಾಹಿತಿ ಆತನ ಪತ್ನಿಯಿಂದಲೇ ಬಹಿರಂಗವಾಗಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಈ ವೈಭವ್ ಜೈನ್ ಐದನೇ ಆರೋಪಿ. ಈತ ಪ್ರತಿದಿನ ಡ್ರಗ್ಸ್ ಸೇವಿಸಿ ಮನೆಗೆ ಬರುವುದು, ಮನಬಂದಂತೆ ಮಾತನಾಡುವುದು, ಜಗಳ ತೆಗೆದು ಹೊಡೆಯುವುದು ಮಾಡುತ್ತಿದ್ದ. ಇದರಿಂದ ಪತ್ನಿ ರೋಸಿಹೋಗಿದ್ದಳು.
ಸಾಲದೆಂಬಂತೆ, ಎರಡನೆಯ ಹೆರಿಗೆಗಾಗಿ ಪತ್ನಿ ಹೈದರಾಬಾದ್‌ಗೆ ಹೋಗಿದ್ದಾಗ ಈತ ಮತ್ತೊಬ್ಬ ಯುವತಿ ಜತೆ ಸಂಬಂಧ ಬೆಳೆಸಿದ್ದ. ಅವಳು ಕೂಡ ಈತನ ಜತೆ ಸೇರಿ ಡ್ರಗ್ಸ್ ಸೇವಿಸುತ್ತಿದ್ದಳು. ಆ ಯುವತಿಯೇ ಈತ ಮೊನ್ನೆ ಪೊಲೀಸರಿಂದ ಫೋನ್ ಪಡೆದು ಲವ್ ಆ್ಯನಿವರ್ಸರಿ ಮೆಸೇಜ್ ಕಳಿಸಿದ ಗೀತಿಕಾ ಎಂದು ಪೊಲೀಸರು ತಿಳಿಸಿದ್ದಾರೆ.
ವೈಭವ್‌ನ ಗಲಾಟೆಯಿಂದ ರೋಸಿ ಹೋಗಿದ್ದ ಅವನ ಪತ್ನಿ ಒಮ್ಮೆ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದಳು. ಡ್ರಗ್ಸ್ ಸೇವಿಸಿ ಬಂದು ಹೊಡೆಯುತ್ತಾನೆ ಎಂದು ಲಿಖಿತ ದೂರನ್ನೂ ನೀಡಿದ್ದಳು. ಅದನ್ನು ದಾಖಲಿಸಿಕೊಂಡಿದ್ದ ಪೊಲೀಸರು ವೈಭವ್‌ನನ್ನು ಹುಡುಕಿ, ಠಾಣೆಗೆ ಕರೆದುಕೊಂಡು ಬಂದಿದ್ದರು. ವಿಚಾರಣೆ ನಡೆಸಿ ಬಂಧಿಸಿದ್ದರು. ಆದರೆ ಆ ಪ್ರಕರಣದಲ್ಲಿ ಆತನಿಗೆ ಕೆಲವೇ ದಿನಗಳಲ್ಲಿ ಜಾಮೀನು ಸಿಕ್ಕಿತ್ತು. ನಂತರ ಅವರಿಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.