ಶಾಸಕರ ಮನೆ ಆವರಣದಲ್ಲೇ ಶ್ರೀಗಂಧದ ಮರ ಕಳವಿಗೆ ಯತ್ನ!

Tree
Published on

ವಿಜಯಪುರ: ಕಳ್ಳರು ಸಾಮಾನ್ಯವಾಗಿ ಕಳವು ಸಂದರ್ಭದಲ್ಲಿ ಹಾಗೂ ಆ ಬಳಿಕ ಎದುರಾಗಬಹುದಾದ ಪರಿಸ್ಥಿತಿ-ಪರಿಣಾಮಗಳನ್ನು ಅಂದಾಜಿಸಿಯೇ ಕಳವಿಗೆ ಮುಂದಾಗುತ್ತಾರೆ. ಆದರೆ ಇಲ್ಲೊಂದು ಕಡೆ ಅವರು ಅಂಥ ಅಂದಾಜು ಮಾಡಿದ್ದರೋ ಇಲ್ಲವೋ, ಒಟ್ಟಿನಲ್ಲಿ ಕಳ್ಳರು ಇಲ್ಲಿ ಕಳವಿಗೆತ್ನಿಸಿ, ಕೊನೆಗೆ ಸಿಕ್ಕಿ ಬೀಳುವ ಭಯದಲ್ಲಿ ಪರಾರಿಯಾಗಿದ್ದಾರೆ.

ಒಂದು ವೇಳೆ ಇಲ್ಲಿ ಕಳ್ಳರೇನಾದರೂ ಸಿಕ್ಕಿ ಹಾಕಿಕೊಂಡಿದ್ದಾರೆ ತಕ್ಕ ಶಾಸ್ತಿಯೇ ಆಗಿರುತ್ತಿತ್ತು. ಏಕೆಂದರೆ ಈ ಕಳ್ಳರು ಕಾಲಿಟ್ಟಿದ್ದು ಶಾಸಕರೊಬ್ಬರ ಮನೆ ಆವರಣಕ್ಕೆ. ಅಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು ಕದ್ದೊಯ್ಯಲು ಯತ್ನಿಸಿದ್ದಾರೆ.

ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚೌವ್ಹಾನ್ ಅವರ ಮನೆ ಆವರಣದಲ್ಲಿ ಈ ಕಳವು ಯತ್ನ ನಡೆದಿದೆ. ವಿಜಯಪುರ ಜಿಲ್ಲೆಯ ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಈ ಆವರಣದೊಳಕ್ಕೆ ಇಂದು ನಸುಕಿನ ಜಾವ ಕಳ್ಳರು ಹೊಕ್ಕಿದ್ದರು. ಮಾತ್ರವಲ್ಲ ಗಂಧದ ಮರದ ಬುಡವನ್ನೇ ಕತ್ತರಿಸಿ ಉರುಳಿಸಿದ್ದರು. ಆದರೆ ಈ ಸಂದರ್ಭದಲ್ಲಿ ಶಬ್ದಕ್ಕೆ ಮನೆಯವರು ಎಚ್ಚರಗೊಳ್ಳುತ್ತಿದ್ದಂತೆ ಬೆಚ್ಚಿಬಿದ್ದ ಕಳ್ಳರು ಮರ ಬಿಟ್ಟು ಪರಾರಿಯಾಗಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net