

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.4 ರಂದು ರಾತ್ರಿಯ ವೇಳೆಯಲ್ಲಿ ಶ್ರೀ ಗಂಧದ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, 25 ಸಾವಿರ ರೂ. ಮೌಲ್ಯದ 41.1 ಕೆ.ಜಿ ತೂಕದ 14 ಶ್ರೀಗಂಧದ ಮರದ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಮೂಲತಃ ಬೆಳುವಾಯಿ ನಿವಾಸಿ ಪ್ರಸ್ತುತ ಕೆ.ಸಿ ನಗರದಲ್ಲಿ ವಾಸವಿರುವ ಮಜೀದ್ ಯಾನೇ ನವಾಜ್, ಬಂಟ್ವಾಳದ ಶರೀಫ್ ಯಾನೇ ದುನಿಯಾ ಶರೀಫ್, ವರ್ಕಾಡಿಯ ಲಕ್ಷ್ಮಣ ಶೆಟ್ಟಿ ಬಂಧಿತರು.
2020 ಮತ್ತು 2021 ರಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಗಂಧದ ಮರ ಕಳವು ಪ್ರಕರಣಗಳು ವರದಿಯಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಮಜೀದ್ ಯಾನೇ ನವಾಜ್ನ ಮಾಹಿತಿಯಂತೆ ಕೆಸಿ ರೋಡ್ ನ ಹಸೈನಾರ್ ಎಂಬುವವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಸಹಾಯಕ ಪೊಲೀಸ್ ಆಯುಕ್ತರಾದ ದಿನಕರ ಶೆಟ್ಟಿರವರ ಮಾರ್ಗದರ್ಶನದಲ್ಲಿ, ಕೊಣಾಜೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ, ಉಪ-ನಿರೀಕ್ಷಕರಾದ ಮಲ್ಲಿಕಾರ್ಜುನ್ ಬಿರಾದಾರ ಮತ್ತು ಶರಣಪ್ಪ ಭಂಡಾರಿ, ಸಿಬ್ಬಂದಿಯವರಾದ ಉಮೇಶ್, ಮೋಹನ್, ಸಂಜೀವ, ಅಶ್ವಿನ್, ಮಹೇಶ್, ಮಂಜಪ್ಪ, ರೇಷ್ಮಾ ಪಿಸಿ ಗಳಾದ ಅಶೋಕ್, ಶಿವಕುಮಾರ್, ಮಂಜುನಾಥ ಸಿ., ದೇವರಾಜ್ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.