

ಚಿಕ್ಕಬಳ್ಳಾಪುರ/ಚಿಂತಾಮಣಿ: ಚಿಂತಾಮಣಿ ತಾಲೂಕಿನ ಮಾಡಿಕೆರೆ ಕ್ರಾಸ್ ಸಮೀಪದ ಕಡಪ ಮತ್ತು ಬೆಂಗಳೂರು ಮಾರ್ಗದ ಹೆದ್ದಾರಿಯಲ್ಲಿ ಜ.3ರಂದು ಪೋಲಿಸರು ವಾಹನ ತಪಾಸಣೆ ವೇಳೆ 21 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದ ಸೇಗು ತುಂಡುಗಳನ್ನು
ವಶಪಡಿಸಿಕೊಂಡಿದ್ದು, 7 ಮಂದಿಯನ್ನು ಬಂಧಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ದಬರಗಾನಹಳ್ಳಿಯ ಮುನಿರಾಜು, ಪ್ರಸನ್ನ, ಪ್ರದೀಪ್, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಮುನಿಯಪ್ಪ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಮಹಮದ್ ಇಸ್ಮಾಯಿಲ್ ಬಂಧಿತರು. ಬಂಧಿತರ ವಿರುದ್ಧ ಚಿಂತಾಮಣಿ ಗ್ರಾಮಾಂತರ, ನಂದಿ ಗಿರಿಧಾಮ, ಬಟ್ಲಹಳ್ಳಿ, ಕೋಲಾರದ ನಂಗಲಿ ಮತ್ತು ಮುಳಬಾಗಿಲು ಸೇರಿ ವಿವಿಧ ಠಾಣೆಗಳಲ್ಲಿ ಶ್ರೀಗಂಧದ ಮರಗಳ ಕಳವಿನ ಹಲವು ಪ್ರಕರಣಗಳು ದಾಖಲಾಗಿವೆ.
ಜ.3ರಂದು ಚಿಂತಾಮಣಿ ತಾಲೂಕಿನ ಮಾಡಿಕೆರೆ ಕ್ರಾಸ್ ಸಮೀಪ ಗ್ರಾಮಾಂತರ ಠಾಣೆಯ ಪಿಎಸ್‌ಐ ನಾರಾಯಣಸ್ವಾಮಿ ನೇತೃತ್ವದ ತಂಡ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರತ್ಯೇಕವಾಗಿ ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ಪೋಲಿಸರನ್ನು ನೋಡಿ ಓಡಲು ಯತ್ನಿಸಿದ್ದಾರೆ. ಇವರನ್ನು ಗಮನಿಸಿದ ಪೋಲಿಸರು ಬೆನ್ನಟ್ಟಿ ಹೋಗಿ ಪರಿಶೀಲಿಸಿದಾಗ ಚೀಲದಲ್ಲಿ ಶ್ರೀಗಂಧದ ತುಂಡುಗಳಿರುವುದು ಗೊತ್ತಾಗಿದೆ. ಬಂಧಿತರಿಂದ 70 ಕೆ.ಜಿ. ಶ್ರೀಗಂಧದ ಸೇಗು ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾತ್ರೋ ರಾತ್ರಿ ಕದ್ದು ಪರಾರಿ: ರೈತರು ಜಮೀನಿನಲ್ಲಿ ಶ್ರೀಗಂಧ ಬೆಳೆದಿರುವುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಆರೋಪಿಗಳು, ರಾತ್ರೋರಾತ್ರಿ ಬಂದು ಕಡಿದುಕೊಂಡು ಪರಾರಿಯಾಗುತ್ತಿದ್ದರು. ಇತ್ತೀಚೆಗೆ ಚಿಂತಾಮಣಿ ತಾಲೂಕಿನ ಚೌಡದೇನಹಳ್ಳಿಯ ರಮೇಶ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ 15 ಶ್ರೀಗಂಧದ ಮರಗಳನ್ನು ರಾತ್ರೋರಾತ್ರಿ ಕಡಿದುಕೊಂಡು ಹೋಗಿದ್ದರು. ಈ ಬಗ್ಗೆ ರೈತ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದನ್ನು ಭೇದಿಸಲು ಎಎಸ್ಪಿ ಕುಶಲ್ ಚೌಕ್ಸೆ, ಚಿಂತಾಮಣಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ವಿಶ್ವಾಸ್, ಸಿಪಿಐ ಪುರುಷೋತ್ತಮ್, ಪಿಎಸ್‌ಐ ನಾರಾಯಣಸ್ವಾಮಿ, ಪೇದೆಗಳಾದ ಸಂದೀಪ್ ಕುಮಾರ್, ಜಗದೀಶ್, ವೆಂಕಟರವಣ, ಮಣಿಕಂಠ, ಪದ್ಮಾ, ಶ್ರೀನಿವಾಸಪ್ಪ, ಸುರೇಶ್, ರವಿಕುಮಾರ್‌ರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು. ಚುರುಕಿನ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಬಹುಮಾನ ಘೋಷಿಸಿದ್ದಾರೆ.