

ಕುಂದಾಪುರ: ಪಂಚಗಂಗಾವಳಿ ಹೊಳೆಯಿಂದ ಮರಳು ಕಳವು ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.
ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ರಿಂಗ್ ರೋಡ್ ಸಮೀಪ ಪಂಚಗಂಗಾವಳಿ ಹೊಳೆಯಲ್ಲಿ ಮರಳು ತೆಗೆದು ದೋಣಿಯಲ್ಲಿ ತುಂಬಿಸುತ್ತಿರುವುದಾಗಿ ವಡೇರಹೋಬಳಿ ಗ್ರಾಮದ ಠಾಣಾ ಬೀಟ್ ಸಿಬ್ಬಂದಿ ಸೂರ್ಯ ಮಾಹಿತಿ ನೀಡಿದ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ ಎನ್., ಸ್ಥಳದಲ್ಲಿದ್ದ ಉದಯ ಮೆಂಡನ್ ಎಂಬುವರನ್ನು ಬಂಧಿಸಿದ್ದು, ಇನ್ನೋರ್ವ ಸುನೀಲ್ ಎಂಬುವರು ಪರಾರಿಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಫೈಬರ್ ದೋಣಿ, 5 ಸಾವಿರ ರೂ. ಮೌಲ್ಯದ ಒಂದುವರೆ ಯುನಿಟ್ ಮರಳು, ಅಂದಾಜು 5 ಲಕ್ಷ ಮೌಲ್ಯದ 407 ಟಿಪ್ಪರ್ ವಾಹನ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೇ ಪರವಾನಿಗೆ ಇಲ್ಲದೆ ಪಂಚಗಂಗಾವಳಿ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು ಶೇಖರಿಸಿರುವುದು ಕಂಡು ಬಂದಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.