ಅದೃಷ್ಟವಿದ್ದವರಿಗೆ ಮರಳು ಟೆಂಡರ್!

1749219115613
Published on

ಸಕಲೇಶಪುರ : ಆರ್ಥಿಕ ಬಲಾಢ್ಯರಿಗಿಂತ ಅದೃಷ್ಟಬಲ ಹೊಂದಿದ್ದವರು ಈ ಬಾರಿಯ ಮರಳು ಗಣಿಗಾರಿಕೆ ಟೆಂಡರ್ ಪಡೆಯುವುದು ನಿಶ್ಚಿತವಾಗಿದೆ..!

2023ಕ್ಕೆ ಕೊನೆಗೊಂಡ ಮರಳು ಗಣಿಗಾರಿಕೆ ಟೆಂಡರ್ ಸುದೀರ್ಘ 2 ವರ್ಷದ ನಂತರ ಮೇ ತಿಂಗಳಿನಲ್ಲಿ ಮತ್ತೊಮ್ಮೆ ಮರಳು ಗಣಿಗಾರಿಕೆಗೆ ಟೆಂಡರ್‌ಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮೇ ತಿಂಗಳ 9 ರಂದು ನಡೆದ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು ಈಗಾಗಲೇ ಮತ್ತೊಂದು ತಿಂಗಳ ಸನಿಹಕ್ಕೆ ಬಂದಿದ್ದರೂ ಟೆಂಡರ್ ತೆರೆಯುವ ಸೂಚನೆಗಳೆ ಕಾಣದಾಗಿದೆ.

ಮೇ 25 ರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಟೆಂಡರ್‌ದಾರರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ತಿರ್ಮಾನಿಸಿದ್ದರು. ಇದರಂತೆ ಕಳೆದ ಹದಿನೈದು ದಿನಗಳಿಂದ ದಾಖಲೆ ಪರಿಶೀಲನೆ ನಡೆದಿದ್ದು ಟೆಂಡರ್‌ನಲ್ಲಿ ಭಾಗಿಯಾಗಿರುವ 274 ಜನರ ದಾಖಲೆ ಪರಿಶೀಲನೆ ಕಷ್ಟಕರ. ಪ್ರತಿಯೊಬ್ಬರ ಟೆಂಡರ್‌ದಾರರ ದಾಖಲೆ 100 ರಿಂದ 150 ಪುಟಗಳಿದ್ದು ಇವುಗಳ ಪರಿಶೀಲನೆ ನಡೆಸಿ, ಮತ್ತೊಂದು ಸಭೆ ನಡೆಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿದ ನಂತರ ಏಕದರ ನಮೂದಿಸಿದ್ದರೆ ಲಾಟರಿ ಮೂಲಕ ಟೆಂಡರ್‌ದಾರರ ಘೋಷಣೆ ಮಾಡಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಈ ಬಾರಿಯ ಟೆಂಡರ್‌ನಲ್ಲಿ ಹಲವು ಆರ್ಥಿಕ ಬಲಾಢ್ಯರು 26 ಮರಳು ಗಣಿಗಾರಿಕೆ ಪ್ರದೇಶಕ್ಕೂ ಭಾಗವಹಿಸಿದ್ದಾರೆ. ಸಣ್ಣ ಹಾಗೂ ಮಾಧ್ಯಮ ಆರ್ಥಿಕತೆ ಹೊಂದಿರುವ ಜನರು ಗುಂಪು ರಚಿಸಿಕೊಂಡು ಷೇರು ಸಂಗ್ರಹಿಸಿ ಎರಡರಿಂದ ಮೂರು ಗಣಿ ಕೇಂದ್ರಗಳಿಗೆ ಟೆಂಡರ್ ಹಾಕಿದ್ದಾರೆ. ಒಟ್ಟಾರೆ ತಮ್ಮ ಹಣ ಬಲದ ಸಾರ್ಮಥ್ಯಕ್ಕೆ ತಕ್ಕಂತೆ ಹಲವರು ಟೆಂಡರ್‌ನಲ್ಲಿ ಭಾಗವಹಿಸಿದ್ದಾರೆ. ಆದರೆ, ಈ ಸಲ ಮನಬಂದಂತೆ ದರ ಸೂಚನೆಗೆ ಅವಕಾಶ ಇಲ್ಲ. ಇದು ಟೆಂಡರ್ ಪಡದೇ ತೀರಬೇಕು ಎಂಬ ಹಂಬಲವಿರುವ ಹಲವರಿಗೆ ನಿರಾಸೆ ಮೂಡಿಸುವುದು ನಿಶ್ಚಿತವಾಗಿದೆ.

ಟೆಂಡರ್ ನಿಯಮದಂತೆ 255 ರಿಂದ 475 ರೂ. ದರದಲ್ಲಿ ಪ್ರತಿ ಮೆಟ್ರಿಕ್ ಟನ್ ಮರಳನ್ನು ನದಿಯಿಂದ ತೆಗೆದು ಸರ್ಕಾರ ಸೂಚಿದ ಪ್ರದೇಶಕ್ಕೆ ಟೆಂಡರ್‌ದಾರರು ಸಾಗಿಸಬೇಕಿದೆ. ಆದರೆ, ಟೆಂಡರ್ ಪಡೆಯಲೇಬೇಕು ಎಂಬ ಹಪಾಹಪಿಯಿಂದ ಬಹುತೇಕ ಟೆಂಡರ್‌ದಾರರು ಕನಿಷ್ಠ ಮೊತ್ತವಾದ 255 ರೂ. ಗಳಿಗೆ ಟೆಂಡರ್ ಸೂಚಿಸಿದ್ದಾರೆ. ಇದರಿಂದಾಗಿ ಅನಿವಾರ್ಯವಾಗಿ ಟೆಂಡರ್ ಲಾಟರಿ ಮೂಲಕ ಬಿಕರಿಯಾಗುವುದು ನಿಶ್ಚಿತವಾಗಿದೆ.

----------

ಲಾಭ ಅಥವಾ ನಷ್ಟ ಆಗಬಹುದು

2017ರ ಮರಳು ಟೆಂಡರ್‌ಗಿಂತ ವಿಭಿನ್ನವಾಗಿರುವ 2025ರ ಮರಳು ಟೆಂಡರ್‌ನಲ್ಲಿ ಹಲವು ವಿಶೇಷಗಳಿದ್ದು ಹೇಮಾವತಿ ನದಿ ಹರಿಯುವ ಆಲೂರು-ಬೇಲೂರು ಹಾಗೂ ಸಕಲೇಶಪುರ ತಾಲೂಕಿನ 26 ಮರಳು ಗಣಿಗಾರಿಕಾ ಪ್ರದೇಶಗಳ ಪೈಕಿ 6 ಎಕರೆಯಿಂದ 30 ಎಕರೆವರೆಗೆ ಟೆಂಡರ್ ಅವಕಾಶ ನೀಡಲಾಗಿತ್ತು. ಸಾಕಷ್ಟು ಸಣ್ಣ, ಮದ್ಯಮ ಹಾಗೂ ಬೃಹತ್ ಮರಳುಗಣಿಗಾರಿಕೆ ಪ್ರದೇಶಗಳನ್ನು ಗಣಿ ಇಲಾಖೆ ಸೂಚಿಸಿತ್ತು. ಇದರಿಂದಾಗಿ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಗಣಿ ಪ್ರದೇಶಗಳನ್ನು ಟೆಂಡರ್‌ದಾರರ ಪಡೆದಿದ್ದರು. ಆದರೆ, ಈ ಬಾರಿ 26 ಮರಳು ಗಣಿಗಾರಿಕಾ ಪ್ರದೇಶಗಳು ಒಂದೇ ಗಾತ್ರದಲ್ಲಿದ್ದ ತಲಾ 12.5 ಎಕರೆ ಪ್ರದೇಶದಲ್ಲಿ ಪ್ರತಿಯೊಂದು ಗಣಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಹಲವು ಗಣಿ ಪ್ರದೇಶದಲ್ಲಿ ಯಥೇಚ್ಛವಾಗಿ ಮರಳು ದೊರೆತರೆ ಕೆಲವೆಡೆ ಸೀಮಿತ ಪ್ರದೇಶದಲ್ಲಿ ಮಾತ್ರ ಮರಳು ದೊರಕುವುದರಿಂದ ಟೆಂಡರ್‌ದಾರರಿಗೆ ನಷ್ಟವಾಗುವ ಸಾಧ್ಯತೆಯಿದೆ. ಕಳೆದ ಬಾರಿಯ ಮರಳು ಟೆಂಡರ್ ಪಡೆದ ವ್ಯಕ್ತಿ ನೇರವಾಗಿ ಮಾರಾಟದ ಹಕ್ಕು ಹೊಂದಿದ್ದರೆ ಈ ಬಾರಿ ಮರಳು ಮಾರಾಟದ ಹಕ್ಕು ಸರ್ಕಾರವೇ ಉಳಿಸಿಕೊಂಡಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದಾಗಿದೆ.

-------

ಕೈ ಬದಲಾವಣೆ ಸಾಧ್ಯತೆ

ಟೆಂಡರ್‌ನಲ್ಲಿ ಪಾಲ್ಗೊಂಡಿರುವ ಪ್ರತಿ ವ್ಯಕ್ತಿ ಪ್ರತಿ ಮರಳು ಗಣಿಗಾರಿಕೆ ಕೇಂದ್ರಕ್ಕೆ ಶೇ. 5 ಕನಿಷ್ಠ ಭದ್ರತಾ ಠೇವಣಿ ಇಟ್ಟು ಟೆಂಡರ್‌ನಲ್ಲಿ ಭಾಗವಹಿಸಿದ್ದಾರೆ. ಇದರಿಂದಾಗಿ ಪ್ರತಿ ಮರಳು ಟೆಂಡರ್‌ದಾರ ಪ್ರತಿ ಮರಳು ಗಣಿಗಾರಿಕಾ ಪ್ರದೇಶಕ್ಕಾಗಿ ಕನಿಷ್ಠ 10 ರಿಂದ 15 ಲಕ್ಷ ರೂ. ಠೇವಣಿ ಪಾವತಿಸಿದ್ದಾರೆ.

ಟೆಂಡರ್ ಪಡೆದ ವ್ಯಕ್ತಿ ಮರಳುಗಾರಿಕಾ ಪ್ರದೇಶದಲ್ಲಿ ದೊರಕುವ ಮರಳಿನ ಸಾಂದ್ರತೆಗೆ ತಕ್ಕಂತೆ ಶೇ 2.5 ದರದಲ್ಲಿ ಮುಂಗಡ ಹಣವನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಇದರಂತೆ ಪ್ರತಿ ಮರಳು ಗಣಿಗಾರಿಕೆ ಪ್ರದೇಶಕ್ಕೆ ಈ ಮೊತ್ತ 30 ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ವರೆಗೂ ತಲುಪುವುದರಿಂದ ಟೆಂಡರ್‌ನಲ್ಲಿ ಭಾಗವಹಿಸಿರುವ ಬಹುತೇಕರು ಈ ಮೊತ್ತ ಪಾವತಿಸುವುದು ಅಸಾಧ್ಯವಾಗಿದೆ. ಆದ್ದರಿಂದ, ಲಾಟರಿ ಮೂಲಕ ಮರಳುಗಣಿಗಾರಿಕೆ ಟೆಂಡರ್ ದೊರೆತರು ಟೆಂಡರ್ ತಮ್ಮದಾಗಿಸಿಕೊಳ್ಳುವುದು ಅಸಾಧ್ಯವಾಗಿದೆ.

ಆದ್ದರಿಂದ, ಟೆಂಡರ್‌ನಲ್ಲಿ ಭಾಗವಹಿಸಿರುವವರ ಪಾಲಿಗೆ ಆರ್ಥಿಕವಾಗಿ ಭಲಾಡ್ಯರಾಗಿರುವ ವ್ಯಕ್ತಿಗಳೇ ಅಪದ್ಬಾಂಧವರಾಗಿ ನಿಲ್ಲಲಿದ್ದು ಯಾದೋ ದಾಖಲೆಯಲ್ಲಿ ಟೆಂಡರ್ ನಡೆದರು ಮತ್ಯಾರೂ ಗಣಿಗಾರಿಕೆ ಮಾಲೀಕರಾಗುವ ಸಾಧ್ಯತೆ ಹೆಚ್ಚಿದ್ದು ಕೈಬದಲಾಗುವ ಸಾದ್ಯತೆ ನಿಚ್ಚಳವಾಗಿದೆ.

ದಾಖಲೆ ಪರಿಶೀಲನೆ ಕಾರ್ಯ ನಡೆಯುತ್ತಿದ್ದು ಇದಾದ ನಂತರ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿ ಏಕದರ ಸೂಚಿಸಿದರೆ ಲಾಟರಿ ಮೂಲಕ ಟೆಂಡರ್‌ದಾರರ ಆಯ್ಕೆ ಮಾಡಲಾಗುವುದು.

ನಾಗರಾಜ್

ಗಣಿ ವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ

------

ಟೆಂಡರ್ ನಡೆದು ತಿಂಗಳೇ ಕಳೆದರೂ ಟೆಂಡರ್ ತೆರೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಿನಮೇಷ ಎಣಿಸುತ್ತಿದ್ದಾರೆ. ಟೆಂಡರ್ ಏನೇ ಆಗಲಿ, ಶೀಘ್ರವೆ ಟೆಂಡರ್ ತೆರಯಬೇಕು.

ಪ್ರಜ್ವಲ್

ಟೆಂಡರ್‌ದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net