

ಮರಳು ಸಿಗುವ ಲೆಕ್ಕಾಚಾರದ ಮಾನದಂಡವನ್ನು ಸರಿಯಾಗಿ ನಮೂದಿಸಬೇಕು. ಸ್ಥಳ ಪರಿಶೀಲನೆಯನ್ನು ಸರಿಯಾಗಿ ಮಾಡುತ್ತಿಲ್ಲ. ಪ್ರತಿಯೊಂದು ಕಡೆಯಲ್ಲಿ ಸರಿಯಾಗಿ ಪರಿಶೀಲನೆ ನಡೆಸಿ ಗುರುತಿಸುವ ಕಾರ್ಯವಾಗಬೇಕು. ಸರಿಯಾದ ಮಾಹಿತಿಯಿಲ್ಲದ ಕಡತಕ್ಕೆ ಸಹಿ ಹೇಗೆ ಮಾಡುವುದು. ಕಡತದ ಒಂದು ಸಣ್ಣ ಸಮಸ್ಯೆಯಿಂದಾಗಿ ವಿಲೇವಾರಿ ಮೂರು ತಿಂಗಳು ತಡವಾಗುತ್ತದೆ ಎಂದು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೇಳಿದರು.
ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ಪುತ್ತೂರು ಉಪ ವಿಭಾಗಮಟ್ಟದ(ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರು) ಮರಳು ಸಮಿತಿ ಸಭೆಯಲ್ಲಿ ಮಾತನಾಡಿದರು.
ಸುಳ್ಯದ ಒಂದು ಬ್ಲಾಕ್‌ಗೆ ಅರಣ್ಯ ಇಲಾಖೆ ಅಡ್ಡಿಯಿದ್ದು, ಇದನ್ನು ಮುಂದುವರಿಸಲಾಗುವುದಿಲ್ಲ. ಪುತ್ತೂರು ವ್ಯಾಪ್ತಿಯಲ್ಲಿ ಒಂದೇ ಸ್ಥಳ ಗುರುತಿಸಲಾಗಿದ್ದು, ದಾಖಲೆಯಲ್ಲಿರುವ ಸಮಸ್ಯೆಯನ್ನು ಎರಡು ದಿನದಲ್ಲಿ ಸರಿಪಡಿಸಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗುವುದು. ಕಡಬದ ನಾಲ್ಕು ಕಡತದಲ್ಲಿ ಒಂದರಲ್ಲಿ ಸಮಸ್ಯೆಯಿದ್ದು, ಮೂರು ಕಡತ ಜಿಲ್ಲಾ ಸಮಿತಿಗೆ ಸಲ್ಲಿಕೆ ಮಾಡುತ್ತಿದೆ. ಬೆಳ್ತಂಗಡಿಯ ಐದು ಕಡತದಲ್ಲಿ ಒಂದು ಸಮಸ್ಯೆಯಿದ್ದು, ನಾಲ್ಕು ಕಡತವನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗುವುದು. ಮರಳಿನ ಅಭಾವ ಇದೆ ಎಂಬ ಕಾರಣಕ್ಕೆ ಹಿಂದೆ ಗುರುತಿಸಿದ ಸಂಪಾಜೆ, ಚಿಬಿದ್ರಿ ಕಡತವನ್ನು ಪುಟಪ್ ಮಾಡಿ ಮುಂದಿನ ಸಭೆಯಲ್ಲಿ ನೀಡಬೇಕು ಎಂದರು.
ಗಣಿ ಇಲಾಖೆಯ ಮಹದೇಶ, ವಸುದಾ, ತಹಸೀಲ್ದಾರ್‌ಗಳಾದ ನಾಗರಾಜ್, ಪ್ರಭಾಕರ ಕಜುರೆ, ಪೃಥ್ವಿ ಸಾನಿಕಮ್, ಗ್ರೇಡ್ ೨ ತಹಸೀಲ್ದಾರ್ ಮಂಜುನಾಥ್, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ನವೀನ್ ಭಂಡಾರಿ, ರಾಜಣ್ಣ, ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ., ಸಂಧ್ಯಾ, ಮಂಜುನಾಥ ಎನ್., ತ್ಯಾಗರಾಜ್ ಎನ್., ಸಹಾಯಕ ಅರಣ್ಯ ಸಂರಕ್ಷಣಾಽಕಾರಿ ಹಸ್ತಾ ಶೆಟ್ಟಿ, ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಮತ್ತಿತರರಿದ್ದರು.
ಉಪ ವಿಭಾಗದ ವಿವಿಧ ಕಡೆ ಜಾಗ!
ಪುತ್ತೂರು ತಾಲೂಕಿನಲ್ಲಿ ಉಪ್ಪಿನಂಗಡಿಯ ಸಮೀಪ ನೇತ್ರಾವತಿ ೬ ಎಕರೆಯಲ್ಲಿ ಜಾಗ ಗೊತ್ತು ಪಡಿಸಲಾಗಿದೆ. ಸುಳ್ಯ ತಾಲೂಕಿನಲ್ಲಿ ೨ ಎಕರೆ ಜಾಗ ಗುರುತಿಸಲಾಗಿದೆ. ಕಡಬದಲ್ಲಿ ೪ ಜಾಗ ಗುರುತಿಸಿದ್ದು, ಗುಂಡ್ಯ ಹೊಳೆ ೨.೫ ಎಕರೆ, ಪೆರಾಬೆಯಲ್ಲಿ ೫ ಹಾಗೂ ೬ ಎಕರೆ, ಕುದ್ಮಾರು ೨.೨೫ ಎಕರೆ ಜಾಗದಲ್ಲಿ ಮರಳು ತೆಗೆಯುವ ದಾಖಲೆ ಸಿದ್ಧಪಡಿಸಲಾಗಿದೆ. ಬೆಳ್ತಂಗಡಿಯಲ್ಲಿ ೫ ಜಾಗ ಗುರುತಿಸಲಾಗಿದ್ದು, ಮೊಗ್ರು ೪.೪೦ ಹಾಗೂ ೫ ಎಕರೆ, ಬಂದಾರು ೪ ಎಕರೆ, ಇಳಂತಿಲ ೧೦ ಎಕರೆ, ಚಿಬಿದ್ರೆ ೧.೫೦ ಎಕರೆಯ ಕಡತ ಸಿದ್ಧಪಡಿಸಲಾಗಿದೆ ಎಂದು ಗಣಿ ಅಽಕಾರಿಗಳು ಮಾಹಿತಿ ನೀಡಿದರು.
ಕಡತಗಳ ತಪ್ಪಿಗೆ ಗರಂ!
ಗುರುತಿಸುವುದು ಜಾಗ ಒಂದು, ನಕ್ಷೆಯಲ್ಲಿ ಒಂದು, ವರದಿಯಲ್ಲಿ ಒಂದು ಸರ್ವೇ ನಂಬರು ಆಗಿದ್ದನ್ನು ಸಹಿ ಮಾಡುವಾಗ ಗಮನಿಸುತ್ತಿಲ್ಲವೇ? ಕಡತಗಳಲ್ಲಿ ಸಮಸ್ಯೆಗಳಿರುವುದನ್ನು ಯಾರೂ ಗಮನಿಸುವುದಿಲ್ಲವೇ? ಸಮಿತಿಯವರೆಗೆ ಸಮಸ್ಯೆಯ ಕಡತಗಳನ್ನು ತರುವುದು ಯಾಕೆ? ತಪ್ಪುಗಳನ್ನು ನನ್ನ ಹಂತದ ವರೆಗೆ ತರುವುದಾದರೆ ತಳ ಹಂತದಲ್ಲಿ ಏನು ಮಾಡುತ್ತಿದ್ದೀರಿ? ಸಂಬಂಧಪಟ್ಟ ಅಽಕಾರಿಗಳು ಸರಿಯಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದರೆ, ಕಡತಗಳನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ ಎಂದು ಸಹಾಯಕ ಆಯುಕ್ತರು ಸುಳ್ಯ ತಹಸೀಲ್ದಾರ್‌ಗೆ ನೋಟಿಸ್ ನೀಡಲು ಆದೇಶಿಸಿದರು.