ಕುಮಾರಧಾರಾದಲ್ಲಿ ಮರಳು ದಂಧೆ - ನದಿ ಒಡಲಿಗೇ ಕನ್ನ - ಅಣೆಕಟ್ಟೆಗೆ ಹಾನಿ - ಸ್ಥಳೀಯರಿಗೆ ಸಿಗುತ್ತಿಲ್ಲ ಹೊಯ್ಗೆ

PTR_12 MAY_11
Published on

ಪುತ್ತೂರು: ಕುಮಾರಧಾರಾ ನದಿ ಒಡಲನ್ನು ರಾತ್ರಿ ಹಗಲೆನ್ನದೆ ಅವೈಜ್ಞಾನಿಕವಾಗಿ ಬಗೆದು ಮರಳು ತೆಗೆಯುತ್ತಿದ್ದಾರೆ. ಶಾಂತಿಮೊಗರು ಅಣೆಕಟ್ಟಿನ ಇಕ್ಕೆಲಗಳಲ್ಲಿ ಮರಳು ತೆಗೆಯುವ ಕೇಂದ್ರಗಳಿದ್ದು, ಇವರ ಸ್ವಾರ್ಥಕ್ಕೆ ನದಿ ನೀರನ್ನೇ ಪೋಲು ಮಾಡಲಾಗಿದೆ. ಎಲ್ಲ ಭಾಗಕ್ಕೂ ಪರವಾನಗಿ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ವಾಸ್ತವವನ್ನು ಜನರಿಗೆ ಹೇಳಬೇಕಾದ ಅಽಕಾರಿಗಳು ಕಚೇರಿಯಿಂದ ಹೊರ ಬರುತ್ತಿಲ್ಲ.

ಶಾಂತಿಮೊಗರು ಆಸುಪಾಸಿನಲ್ಲಿ ಎಗ್ಗಿಲ್ಲದೆ ಮರಳು ತೆಗೆಯಲಾಗುತ್ತಿದ್ದರೂ ಜನಸಾಮಾನ್ಯರಿಗೆ ಮಾತ್ರ ಮರಳು ಲಭಿಸುತ್ತಿಲ್ಲ. ಅಣೆಕಟ್ಟಿನ ಮೇಲ್ಭಾಗ ಹಾಗೂ ಕೆಳ ಭಾಗದಲ್ಲಿ ಮರಳು ತೆಗೆಯುವ ಕಾರ್ಯ ನಡೆದಿದೆ. ಐತಿಹಾಸಿಕ ಪರಂಪರೆಯುಳ್ಳ ಐರಾಳದಲ್ಲೂ ಬೃಹತ್ ಯಂತ್ರಗಳನ್ನು ಬಳಸಿ ನದಿಯೊಡಲನ್ನು ಅಗೆದು ಮರಳೆತ್ತಿ ಕೆರೆಗಳ ನಿರ್ಮಾಣ ಮಾಡಲಾಗಿದೆ.

*ನದಿಗಳ ಸ್ವರೂಪ ಬದಲು : ನದಿಗಳಲ್ಲಿ ನೀರಿನ ಹರಿವಿನ ದಿಕ್ಕು ಬದಲಿಸುವ ರೀತಿಯಲ್ಲಿ ಕೃತಕ ದಂಡೆಗಳ ನಿರ್ಮಾಣವನ್ನೂ ದಂಧೆಕೋರರು ಮಾಡಿದ್ದಾರೆ. ಕಾನೂನನ್ನು ಗಾಳಿಗೆ ತೂರಿ ನದಿಗಳ ಸ್ವರೂಪವನ್ನೇ ಬದಲು ಮಾಡುತ್ತಿದ್ದರೂ ಅಽಕಾರಿಗಳು ಮಾತ್ರ ತಮಗೆ ಸಂಬAಧವೇ ಇಲ್ಲದಂತೆ ಇದ್ದಾರೆ. ಪ್ರಕೃತಿ ಮುನಿದ ಬಳಿಕ ಬೊಬ್ಬೆ ಹಾಕುವ ವ್ಯವಸ್ಥೆ ಮೊದಲೇ ಎಚ್ಚೆತ್ತುಕೊಳ್ಳದಿರುವುದು ದುರಂತ.

*ನಿಯಮ ಸಾರಾಸಗಟು ಉಲ್ಲಂಘನೆ : ಪರವಾನಿಗೆ ಇರುವ ಪ್ರದೇಶದಲ್ಲಿ ತೆಗೆದ ಮರಳನ್ನು ಅಕ್ಕಪಕ್ಕದಲ್ಲೇ ದಾಸ್ತಾನು ಮಾಡಬೇಕೆಂಬ ನಿಯಮ ಇದ್ದರೂ, ಜಾಗದ ಕೊರತೆ ಹೇಳಿಕೊಂಡು ಬೇರೆ ಬೇರೆ ಜಾಗದಲ್ಲಿ ಶೇಖರಿಸಲಾಗಿದೆ. ಸ್ಥಳೀಯ ಅಽಕಾರಿಗಳ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಮೇಲಧಿಕಾರಿಗಳ ದಾರಿ ತಪ್ಪಿಸಿ ಅಕ್ರಮ ದಾಸ್ತಾನುಗಳನ್ನು ರಕ್ಷಿಸಿಕೊಳ್ಳುವ ಕೆಲಸ ದಂಧೆ ಕೋರರು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

6 ಪ್ರತ್ಯೇಕ ಪ್ರಕರಣ:
ಕುಮಾರಧಾರಾ ನದಿಯಿಂದ ಕುದ್ಮಾರು ನೂಜಿಯಲ್ಲಿ ದಿನೇಶ್ ಮೆದು ಹಾಗೂ ಚೆನ್ನಪ್ಪ ಗೌಡ ಅವರು ಮರಳು ಕಳ್ಳತನ ಮಾಡಿ ಸಂಗ್ರಹಿಸಿದ ಸ್ಥಳದಿಂದ ಸಾಗಾಟ ಮಾಡುತ್ತಿದ್ದ ವಿಚಾರದಲ್ಲಿ ಬೆಳ್ಳಾರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 70 ಲಕ್ಷ ರೂ. ಮೌಲ್ಯದ 6 ಟಿಪ್ಪರ್, 1 ಹಿಟಾಚಿ, 60 ಸಾವಿರ ರೂ.ಮೌಲ್ಯದ ಮರಳನ್ನು ವಶಕ್ಕೆ ಪಡೆದಿದ್ದಾರೆ.

ಕೃತಕ ಅಭಾವ ಸೃಷ್ಟಿ?
ಮರಳು ದಾಸ್ತಾನು ಕೇಂದ್ರಗಳಲ್ಲಿ ಲೋಡ್‌ಗಟ್ಟಲೆ ಮರಳಿದ್ದರೂ, ಗ್ರಾಮೀಣ ಭಾಗದಲ್ಲಿ ಮರಳಿನ ಅಭಾವ ಸೃಷ್ಟಿಸುವ ಕೆಲಸವನ್ನು ದಂಧೆಕೋರರು ಮಾಡುತ್ತಿದ್ದಾರೆ. ಚಾರ್ವಾಕ ಸೇರಿ ಹಲವು ಭಾಗದಲ್ಲಿ ಮರಳು ತೆಗೆಯಲು ಪರವಾನಗಿ ಇಲ್ಲದಿದ್ದರೂ, ಅಕ್ಕಪಕ್ಕದ ಗ್ರಾಮದಲ್ಲಿ ತೆಗೆದ ಮರಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಮಳೆಗಾಲದಲ್ಲಿ ಈ ಮರಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ.

ಎಲ್ಲವೂ ಸಕ್ರಮ !
ಜಿಲ್ಲೆಯಲ್ಲಿ ಮರಳು ತೆಗೆಯುತ್ತಿರುವ ಎಲ್ಲ ಪ್ರದೇಶಗಳೂ ಕಾನೂನು ಬದ್ಧವಾಗಿವೆ ಎಂದು ಗಣಿ ಇಲಾಖೆಯ ಅಽಕಾರಿಗಳು ಹೇಳುತ್ತಿದ್ದಾರೆ. ನದಿಯಲ್ಲಿ ನೀರು ಖಾಲಿಯಾಗಿರುವುದರಿಂದ ಬೃಹತ್ ಜೆಸಿಬಿಗಳನ್ನು ಬಳಸಿಕೊಂಡು ಲೋಡ್‌ಗಟ್ಟಲೆ ಮರಳು ತೆಗೆದು ನದಿ ತಟದಲ್ಲಿ ಬೃಹತ್ ಗುಂಡಿಗಳನ್ನು ನಿರ್ಮಾಣ ಮಾಡಿರುವುದು ಸಕ್ರಮವಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಕನ್ನ ಕೊರೆದು ನೀರು ಖಾಲಿ!
ಶಾಂತಿಮೊಗರು ಅಣೆಕಣ್ಣಿನ ಮೇಲ್ಭಾಗದಲ್ಲಿ ಮರಳು ತೆಗೆಯಲು ಸಂಗ್ರಹವಾದ ನೀರು ಸಮಸ್ಯೆಯಾಗುತ್ತದೆ ಎಂದು ಅಣೆಕಟ್ಟೆಗೆ ಕನ್ನಕೊರೆದು ನೀರು ಸೋರಿಕೆ ಮಾಡಲಾಗಿದೆ. ಆ ಬಳಿಕ ತಳಭಾಗದ ಕುದ್ಮಾರು ನೂಜಿ ಭಾಗದಲ್ಲಿ ಮರಳು ತೆಗೆಯುವವರು ಮಣ್ಣು ಸೇರಿದ ಮರಳನ್ನು ಸ್ವಚ್ಛ ಮಾಡಲು ಮತ್ತೆ ಅಣೆಕಟ್ಟಿಗೆ ತೂತು ಮಾಡಿ ನೀರು ಬಿಟ್ಟಿದ್ದರಿಂದ ಅಣೆಕಟ್ಟು ಖಾಲಿಯಾಗಿದೆ. ಇದರಿಂದ ಕಂಗಾಲದ ಸ್ಥಳೀಯ ಕೃಷಿಕರು ಶಾಂತಿಮೊಗರಿನಲ್ಲಿ ಪ್ರತಿಭಟನೆ ನಡೆಸಿದ್ದರು.

ಅಕ್ರಮವಾಗಿ ಮರಳು ದಂಧೆ ನಡೆಸುವರ ಮೇಲೆ ರೌಡಿಶೀಟರ್ ತೆರೆಯುವ ಜತೆಗೆ ಹಳೆಯ ಎಲ್ಲ ಪ್ರಕರಣಗಳನ್ನು ಮತ್ತೆ ವಿಚಾರಣೆಗೆ ತೆಗೆದುಕೊಳ್ಳಲಾಗುವುದು. ಗೂಂಡಾ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವುದಲ್ಲದೆ, ಜಾಮೀನು ಸಿಗದ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಅತ್ಯಽಕ ಮೊತ್ತಕ್ಕೆ ಬ್ಯಾಂಕ್ ಗ್ಯಾರಂಟಿ ನೀಡುವಂತೆ ನ್ಯಾಯಾಲಯಕ್ಕೆ ಕೇಳಲಾಗುವುದು. ಕಾನೂನು ಬಾಹಿರವಾಗಿ ಮರಳು ತೆಗೆಯುವ ಕಾರ್ಯ ನಡೆಯುತ್ತಿರುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದರೊಂದಿಗೆ ದಂಧೆ ನಡೆಸುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ.
| ರಿಷ್ಯಂತ್ ಸಿ.ಬಿ.
ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net