

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಅಣೆಕಟ್ಟು ಕಟ್ಟಿ ಹಿನ್ನೀರು ಸಂಗ್ರಹಿಸುವ ನಡೆಯಿಂದಾಗಿ ನದಿಯಲ್ಲಿ ಮಣ್ಣು ಮಿಶ್ರಿತ ಮರಳಿನ ದಿಬ್ಬಗಳು ಸೃಷ್ಟಿಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ದಿಬ್ಬಗಳು ವಿಸ್ತಾರಗೊಂಡು ನದಿಯನ್ನು ಕಿರಿದಾಗಿಸುವ ಸ್ಥಿತಿ ಉಂಟಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮತ್ತಷ್ಟು ವಿಸ್ತಾರಗೊಂಡ ಮಣ್ಣು ಮಿಶ್ರಿತ ಮರಳ ದಿಬ್ಬಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಬೆಳೆಯುವ ಗಿಡಗಂಟಿಗಳಿಂದಾಗಿ ಸವಕಳಿಗೆ ಒಳಗಾಗದೆ ಉಳಿಯುತ್ತಿವೆ. ಈ ಬಾರಿಯ ನಿರಂತರ ಮಳೆ ಹಾಗೂ ನದಿಯಲ್ಲಿನ ನೀರಿನ ಪ್ರವಾಹಕ್ಕೂ ಕರಗಿಲ್ಲ. ಇದರಿಂಗಾಗಿ ನದಿ ಒಡಲಿನಲ್ಲಿ ಈ ಮೊದಲು ಕಾಣಿಸುತ್ತಿದ್ದ ಶುಭ್ರ ಮರಳೂ ಕಾಣಿಸದಂತಾಗಿದೆ. ನದಿಯ ಒಡಲಿನಲ್ಲಿ ಅಸ್ವಾಭಾವಿಕವಾಗಿ ಇಂತಹ ಮರಳ ದಿಬ್ಬಗಳು ಬೆಳೆಯುತ್ತಾ ಹೋದರೆ ನದಿಯ ಸ್ವರೂಪವೇ ಬದಲಾವಣೆಗೊಂಡು ಮಳೆಗಾಲದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಅಧಿಕವಾಗಿದೆ.