ಡೆಡ್ ಸ್ಟೋರೆಜ್ ತಲುಪಿದ ಸನವಳ್ಳಿ ಜಲಾಶಯ

Sanavalli Reservoir reached dead storage
ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸನವಳ್ಳಿ ಜಲಾಶಯದಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿರುವುದು.
Published on

ಮುಂಡಗೋಡ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತಾಲೂಕಿನ ಸನವಳ್ಳಿ ಜಲಾಶಯದ ನೀರು ಡೆಡ್ ಸ್ಟೋರೆಜ್ ತಲುಪಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕಳೆದು ಐದಾರು ತಿಂಗಳಿನಿಂದ ತಾಲೂಕಿನಲ್ಲಿ ಉತ್ತಮವಾದ ಮಳೆಯಾಗದ ಕಾರಣ ತಾಲೂಕಿನ ಎಲ್ಲ ಕೆರೆ, ಕಟ್ಟೆಗಳು ಬಹುತೇಕ ಕೊಳವೆಬಾವಿಗಳು, ತೆರೆದಬಾವಿಗಳು ನೀರಿಲ್ಲದೆ ಸಂಪೂರ್ಣವಾಗಿ ಬತ್ತಿ ಹೋಗಿವೆ. ಇದರಿಂದ ಅಡಕೆ, ಬಾಳೆ ಸೇರಿ ಇತರ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇದೀಗ ಬೆಳೆಗಳ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.

ಮತ್ತೊಂದೆಡೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸನವಳ್ಳಿ ಜಲಾಶಯದ ನೀರು ಖಾಲಿಯಾಗುವ ಹಂತ ತಲುಪಿದ್ದು, ಸದ್ಯ ಡೆಡ್ ಸ್ಟೋರೇಜ್ (ತಳಹಂತದ) ನೀರು ಮಾತ್ರ ಸಂಗ್ರಹವಿದೆ. ಇದರಿಂದಾಗಿ ಪಟ್ಟಣದ ಜನತೆಗೆ ಕುಡಿಯುವ ನೀರು ಹೇಗೆ ಪೂರೈಸಬೇಕು ಎಂಬ ಚಿಂತೆ ಪಟ್ಟಣ ಪಂಚಾಯಿತಿಯವರನ್ನು ಕಾಡುತ್ತಿದೆ.

ಮುಂದಿನ ಒಂದು ವಾರದಲ್ಲಿ ತಾಲೂಕಿನಲ್ಲಿ ಉತ್ತಮವಾದ ಮಳೆ ಆಗದಿದ್ದರೆ ಮತ್ತಷ್ಟು ನೀರಿನ ಸಮಸ್ಯೆ ಎದುರಾಗಲಿದೆ. ತಾಲೂಕಿನ ಬಾಚಣಕಿ ಜಲಾಶಯ ಹೊರತುಪಡಿಸಿದರೆ ಬೇರೆ ಎಲ್ಲ ಜಲಾಶಯಗಳಲ್ಲಿ ನೀರು ಖಾಲಿಯಾಗಿ ಕೆಳಹಂತ (ಡೆಡ್ ಸ್ಟೋರೇಜ್) ತಲುಪಿವೆ.

ತಾಲೂಕಿನ ನ್ಯಾಸರ್ಗಿ, ರಾಮಾಪುರ, ಅತ್ತಿವೇರಿ, ಸನವಳ್ಳಿ, ಚಿಗಳ್ಳಿ, ಅರಶಿನಗೇರಿ, ಸಿಂಗನಳ್ಳಿ, ಮಳಗಿ, ಸಾಲಗಾವಿ, ಅಟ್ಟಣಗಿ ಹಾಗೂ ಪಾಳಾ ಸೇರಿ ತಾಲೂಕಿನ 28 ಪ್ರಮುಖ ಕೆರೆಗಳು ಖಾಲಿಯಾಗಿವೆ ಎಂದು ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಿನದಿಂದ ದಿನಕ್ಕೆ ಅಂತರ್ಜಲ ಕುಸಿತ ಹೆಚ್ಚಾಗುತ್ತ ಸಾಗುತ್ತಿದ್ದು, ಇದರಿಂದ ನೀರಿನ ಹಾಹಾಕಾರ ಮಿತಿಮೀರುತ್ತಿದೆ. ಉತ್ತಮವಾದ ಮಳೆ ಸುರಿದರೆ ಮಾತ್ರ ಕೆರೆಗಳು ಭರ್ತಿಯಾದರೆ ಅನುಕೂಲವಾಗಲಿದೆ ಎಂದು ಜನರು ಮಳೆಗಾಗಿ ದೇವರಲ್ಲಿ ಮೊರೆಯಿಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net