

ಮುಂಡಗೋಡ: ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಹಸೀಲ್ದಾರ್ ಶಂಕರ ಗೌಡಿ ನೇತೃತ್ವದ ಅಧಿಕಾರಿಗಳ ತಂಡ ಸನವಳ್ಳಿ ಜಲಾಶಯಕ್ಕೆ ಬುಧವಾರ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲಿಸಿ ಜಲಾಶಯದ ಎರಡು ಗೇಟ್ ಗಳನ್ನು ಬಂದ್ ಮಾಡುವಂತೆ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಆಗುವ ಸನವಳ್ಳಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಮಟ್ಟ ಕಡಿಮೆ ಆಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಟ್ಟಣದ ಜನರಿಗೆ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮವಾಗಿ ಜಲಾಶಯದ ಎರಡು ಬದಿಯ ಗೇಟ್ ಗಳನ್ನು ಬಂದ್ ಮಾಡಿ ಜಲಾಶಯದ ನೀರಿನ್ನು ಕಾಯ್ದಕೊಳ್ಳುವಂತೆ ಚಿಕ್ಕ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ.
ಪಟ್ಟಣಕ್ಕೆ ವಾರದದಲ್ಲಿ ಮೂರು ದಿನಗಳು ಮಾತ್ರ ನೀರನ್ನು ಒದಗಿಸಲಾಗುತ್ತಿದೆ. ಒಂದು ಗಂಟೆಯಿಂದ ಎರಡು ಗಂಟೆಗಳ ಕಾಲ ನೀರು ಬೀಡಲಾಗುತ್ತಿತ್ತು ಆದರೆ ಈಗ ಜಲಾಶಯದ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಅರ್ಧ ಗಂಟೆ ಕಡಿಮೆ ಮಾಡಿತ್ತಿದ್ದೇವೆ ಎಂದು ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಅವರು ತಹಸೀಲ್ದಾರ್. ಗಮನಕ್ಕೆ ತಂದರು.
ತಹಸೀಲ್ದಾರ್ ಮಾತನಾಡಿ, ಮುಂದೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಈಗಿನಿಂದಲೇ ಕ್ರಮವಹಿಸಿ ಜಲಾಶಯದ ಪಕ್ಕದಲ್ಲಿ ಬೋರವೆಲ್ ಹೊಡೆಯ ಬಹುದೇ ಎಂದು ಮುಖ್ಯಾಧಿಕಾರಿಗಳಿಗೆ ಕೇಳಿದಾಗ ಈಗಾಗಲೇ ಜಲಾಶಯದ ಒಳಗಡೆಯೇ ಐದಾರು ಬೋರವೆಲ್ ಗಳು ಇವೆ. ನೀರಿನ ಪ್ರಮಾಣ ಕಡಿಮೆಯಾದರೆ ಅಲ್ಲಿರುವ ಬೋರವೆಲ್ ಮೂಲಕ ನೀರು ಪಡೆಯಬಹುದು ಎಂದರು.
ಸನವಳ್ಳಿ ಭಾಗದಲ್ಲಿ ಅನಧಿಕೃತ ಇಟ್ಟಿಗೆ ಬಟ್ಟಿಗಳು ಹೆಚ್ಚಾಗಿವೆ. ಕಳೆದ ವರ್ಷ ಎಚ್ಚರಿಕೆ ನೀಡಿದ್ದೇವೆ. ಈ ಬಾರಿ ಅನಧಿಕೃತವಾಗಿ ಇಟ್ಟಿಗೆ ಬಟ್ಟಿಗಳು ತಲೆ ಎತ್ತಿದರೆ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು ಎಂದರು.
ನೀರು ಬೀಡುವಂತೆ ರೈತರ ಆಗ್ರಹ: ಗದ್ದೆಯಲ್ಲಿ ಈಗಾಗಲೇ ಭತ್ತ, ಗೋವಿನಜೋಳದ ಬೆಳೆ ಒಳಗುತ್ತಿವೆ ಆದ ಕಾರಣ ಇನ್ನು ಒಂದು ವಾರ ಕಾಲುವೆ ಮೂಲಕ ನೀರು ಹರಿಸುವಂತೆ ರೈತರು ತಹಶೀಲ್ದಾರ್ ಅವರಿಗೆ ಆಗ್ರಹಿಸಿದರು ಆದರೆ ತಹಸೀಲ್ದಾರ್ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.
ಈ ವೇಳೆ ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ, ಚಿಕ್ಕ ನೀರಾವರಿ ಇಲಾಖೆಯ ಎಇಇ.ಆರ್.ಎಠ. ದಪೇದಾರ ಇದ್ದರು.
ಮುಂಡಗೋಡ ಪಟ್ಟಣಕ್ಕೆ ಸನವಳ್ಳಿ ಜಲಾಶಯದಿಂದ ನೀರು ಸರಬರಾಜು ಆಗುತ್ತಿದೆ ಮುಂದೆ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಭೇಟಿ ನೀಡಿದ್ದೇನೆ. ಜಲಾಶಯದ ಎರಡು ಗೇಟ್ಗಳನ್ನು ಬಂದ್ ಮಾಡುವಂತೆ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ. ಶಂಕರ ಗೌಡಿ ತಹಸೀಲ್ದಾರ್.