ಉದಯನಿಧಿ ಹೇಳಿಕೆ ಬಗ್ಗೆ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ

JOSHI NEWWWWW
Published on

ಹುಬ್ಬಳ್ಳಿ : ಸನಾತನ ಧರ್ಮ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಅವಹೇಳನಕಾರಿ ಹೇಳಿಕೆ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಬುದ್ಧಿವಂತ ಎಂದುಕೊಂಸಿದ್ದೇವು. ಆದರೆ, ಅವರು ಸಹ ಮತಬ್ಯಾಂಕ್​ಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಅದರೂ, ಅವರಾಗಲಿ ಅಥವಾ ಕಾಂಗ್ರೆಸ್ ಪಕ್ಷದ ಇತರ ಮುಖಂಡರಾಗಲಿ ಸನಾತನ ಧರ್ಮದ ಪರವಾಗಿ ಒಂದೂ ಹೇಳಿಕೆ ನೀಡುತ್ತಿಲ್ಲ. ಘಮಂಡಿಯಾ ಘಟಬಂಧನ ಉಳಿಸಿಕೊಳ್ಳುವ ಉದ್ದೇಶದಿಂದ ಯಾರೊಬ್ಬರೂ ಉದಯನಿಧಿ ಸ್ಟಾಲಿನ್ ಹೇಳಿಕೆ ವಿರೋಧಿಸುತ್ತಿಲ್ಲ ಎಂದು ಹೇಳಿದರು.

ಸನಾತನ ಧರ್ಮ ಒಂದು ಜೀವನ ಪದ್ಧತಿ. ಸನಾತನ ಧರ್ಮದ ಬಗ್ಗೆ ನಂಬಿಕೆ ಇಟ್ಟ ಕೋಟ್ಯಂತರ ಜನ ಇದ್ದಾರೆ. ಇದು ದೇಶದ ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರಶ್ನೆ. ಈ ಘಟನೆಯನ್ನು ಕಾಂಗ್ರೆಸ್ ಖಂಡಿಸದಿದ್ದರೆ ದುರುದ್ದೇಶದಿಂದ ತುಷ್ಠೀಕರಣ ರಾಜಕಾರಣ ಮಾಡುತ್ತಿರುವುದು ಸ್ಪಷ್ಟವಾದಂತಾಗುತ್ತದೆ ಎಂದರು.

ಪ್ರತಿಪಕ್ಷದವರು ಸಂಸತ್ ಅಧಿವೇಶನದ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಧಿವೇಶನ ಕರೆಯುವ ಮೊದಲು ಪ್ರತಿಪಕ್ಷದವರನ್ನು ಕೇಳುವ ಪದ್ಧತಿ ಮೊದಲಿನಿಂದಲೂ ಇಲ್ಲ ಎಂದು ತಿಳಿಸಿದರು.

ಬಾರಿ ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದ ವಿವಿಧ ಪಕ್ಷಗಳ ಚುನಾಯಿತ ಸರ್ಕಾರಗಳನ್ನು ಕಿತ್ತೊಗೆದಿರುವ ಕಾಂಗ್ರೆಸ್, ಇದೀಗ ನಮಗೆ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ತಲೆದೋರಿದ್ದರೂ ಘಮಂಡಿಯಾ ಘಟಬಂಧನ ಉಳಿಸುವ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ. ರಾಜ್ಯದ ಹಿತಾಸಕ್ತಿ ಬಲಿಕೊಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ನ್ಯಾಯಾಲಯದ ಮೆಟ್ಟಿಲು ಏರಿದೆ ಎಂದು ಟೀಕಿಸಿದರು.

ನಟ ಪ್ರಕಾಶ ರಾಜ್ ಒಂದು ಅತೃಪ್ತ ಆತ್ಮ. ಅವರು ಹಿಂದು ಧರ್ಮದ ಕುರಿತು ನೀಡಿರುವ ಹೇಳಿಕೆ ಉದ್ಧಟತನದ್ದು. ಸದಾ ಸುದ್ದಿಯಲ್ಲಿ ಇರಬೇಕೆಂಬ ಉದ್ದೇಶದಿಂದ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು.

ಕೇಂದ್ರ ಸರ್ಕಾರದ ವಕ್ತಾರರು ಭಾರತ ಹೆಸರಿನ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಭಾರತ ಅಥವಾ ಇಂಡಿಯಾ ಹೆಸರುಗಳಲ್ಲಿ ಯಾರಿಗೆ ಯಾವುದು ಇಷ್ಟವೋ ಅದನ್ನು ಹೇಳಿಕೊಳ್ಳಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net