

ಹೊಸದುರ್ಗ: ಸನಾತನ ಹಿಂದು ಧರ್ಮ ತನ್ನಲ್ಲಿನ ಉತ್ತಮ ಸಿದ್ಧಾಂತ, ತತ್ವಗಳು ಹಾಗೂ ಆಚರಣೆಗಳಿಂದ ವಿಶ್ವವ್ಯಾಪಿಯಾಗಿದೆ ಎಂದು ಬೆಲಗೂರು ಮಾರುತಿ ಪೀಠದ ಶ್ರೀ ವಿಜಯಮಾರುತಿ ಶರ್ಮ ಸ್ವಾಮೀಜಿ ತಿಳಿಸಿದರು.
ವಿರಾಟ್ ಹಿಂದು ಮಹಾಸಾಗರ ಗಣಪತಿಯ 10ನೇ ವರ್ಷದ ಆಚರಣೆ ಆಂಗವಾಗಿ ಪಟ್ಟಣದ ಟಿ.ಬಿ.ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಗೋಪೂಜೆ ಹಾಗೂ ಧರ್ಮ ಧ್ವಜಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜ ಹಾಗೂ ಧರ್ಮದ ಕಾರ್ಯಗಳನ್ನು ಮಾಡುವಾಗ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಂದಾಗಿ ಪಾಲ್ಗೊಳ್ಳುವ ಮನೋಭಾವ ಬೆಳೆಯಬೇಕು. ನಮ್ಮಲ್ಲಿರುವ ವೈಮನಸ್ಸನ್ನು ಮರೆತು ಸಮಾಜ ಕಾರ್ಯಕ್ಕೆ ಒಗ್ಗೂಡಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.
ಅವಧೂತ ಶ್ರೀ ಬಿಂಧುಮಾಧವ ಶರ್ಮ ಸ್ವಾಮೀಜಿ ಅವರ ಕೃಪಾಶೀರ್ವಾದಿಂದ ಗಣೇಶ ಉತ್ಸವ ನಿರಂತರವಾಗಿ ಜನಮನ್ನಣೆ ಪಡೆಯುತ್ತಿದೆ. ಈ ಬಾರಿಯೂ ಅದ್ದೂರಿಯಾಗಿ ನೆರವೇರಲಿದೆ. ಗಣೇಶೋತ್ಸವದ ಮೂಲಕ ಜನರಲ್ಲಿ ಧರ್ಮದ ಚಿಂತನೆಗಳನ್ನು ಬಿತ್ತುವ ಕೆಲಸ ಮಾಡುತ್ತಿರುವುದು ಮಾದರಿ ಕಾರ್ಯ ಎಂದು ಹೇಳಿದರು.
ಸಮಾಜ ಸೇವಕ ಟಿ.ಮಂಜುನಾಥ್ ಮಾತನಾಡಿ, ಉತ್ತಮ ಮಳೆ, ಬೆಳೆ ಆಗಲಿ ಎನ್ನುವ ಸಂಕಲ್ಪದೊಂದಿಗೆ ಗಣೇಶೋತ್ಸವಕ್ಕೆ ಗೋಪೂಜೆ ಮೂಲಕ ಚಾಲನೆ ನೀಡಲಾಗಿದೆ. ಎಲ್ಲರೂ ಕೈ ಜೋಡಿಸುವ ಮೂಲಕ ಉತ್ಸವವನ್ನು ಯಶ್ವಸಿಗೊಳಿಸೋಣ ಎಂದರು.
ಉದ್ಯಮಿ ಡಿ.ಎಸ್.ಪ್ರದೀಪ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ಪ್ರವೀಣ್, ಉದ್ಯಮಿ ವಿಜಯಕುಮಾರ್, ವಕೀಲ ಶ್ರೀನಿವಾಸಮೂರ್ತಿ, ಶಿವರಾಜ್, ಸತೀಶ, ರವಿಕುಮಾರ, ಭರತ್, ಚಿರು, ಮಂಜುನಾಥ್ ಮತ್ತಿತರಿದ್ದರು.
ಧಾರ್ಮಿಕ ಕಾರ್ಯಕ್ರಮ: ಹತ್ತನೇ ವರ್ಷದ ಗಣೇಶೋತ್ಸವಕ್ಕೆ ಶ್ರೀಗಳು ಧರ್ಮ ದ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದ್ದಾರೆ. ಗುರುಗಳ ಮಾರ್ಗದರ್ಶನದಂತೆ ಗಣೇಶೋತ್ಸವ ಅದ್ದೂರಿಯಾಗಿ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು.- ಪ್ರದೀಪ್, ಅಧ್ಯಕ್ಷ, ವಿರಾಟ್ ಹಿಂದು ಮಹಾಸಾಗರ ಗಣಪತಿ ಸಮಿತಿ