

ಮುಂಡರಗಿ: ಸನಾತನ ಧರ್ಮ ಪ್ರಾಚೀನ, ಪುರಾತನವಾದ ಧರ್ಮವಾಗಿದೆ. ಆಂಗ್ಲರು ಮತ ಪರಿವರ್ತನೆಗಾಗಿ ಹೆಣಗಿದರೂ ಸನಾತನ ಧರ್ಮ ಉಳಿದು ಬಂದಿದ್ದು, ಸ್ಥಿರವಾಗಿ ನಿಂತಿದೆ. ಧರ್ಮದ ಸೂಕ್ಷ್ಮತೆ ನಾಶವಾಗದು. ಧರ್ಮದ ಮರ್ಮವೇನೆಂಬುದನ್ನು ಅರಿಯುವುದು ಮುಖ್ಯವಾಗಿದೆ ಎಂದು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಶ್ರೀಗಳು, ಸಾವಿರಾರು ವರ್ಷಗಳಿಂದ ಧರ್ಮದ ವ್ಯಾಖ್ಯಾನ ಮಾಡುತ್ತ್ತ ಬಂದಿದ್ದಾರೆ. ಋಷಿಮುನಿಗಳು ಧರ್ಮವನ್ನು ತಮ್ಮ ಪ್ರಾಣವಾಗಿಸಿಕೊಂಡವರು. ಅದಕ್ಕೆ ಚ್ಯುತಿ ಬಾರದಂತೆ ಆಚರಿಸಿದರು. ರಾಜರು ಧರ್ಮನಿಷ್ಠ ರಾಜ್ಯಭಾರ ಮಾಡಿದರು. ಅಂಥವರ ಹೆಸರು ಉಳಿದಿದೆ. ಮಹಾಭಾರತದ ದುರ್ಯೋಧನನ ನೂರಾರು ಸಹೋದರರು ಹೇಳಹೆಸರಿಲ್ಲದಂತೆ ಹಾಳಾದರು. ಆದರೆ, ಕೇವಲ ಐದು ಜನರಿಂದ ಕೂಡಿದ ಪಂಚಪಾಂಡವರ ರಾಜ ಧರ್ಮರಾಜನೆಂದೇ ಹೆಸರಾದನು. ಕೀರ್ತಿಗೆ ಭಾಜನರಾದನು. ಧರ್ಮಂ ಚರ, ಸತ್ಯಂ ವದ, ಧರ್ಮ ಹೇಳುವುದಕ್ಕಲ್ಲ, ಸತ್ಯವನ್ನು ಸದಾ ನುಡಿಯಬೇಕು. ಇಂತಹ ಸಾಧನೆಯಿಂದ ಗಾಂಧೀಜಿಯವರು ಮಹಾತ್ಮರೆನಿಸಿದರು.
ಧರ್ಮದ ನೈಜವಾದ ವ್ಯಾಖ್ಯಾನವನ್ನು ನೋಡುವುದಾದರೆ, ಋಷಿಗಳು ಹೀಗೆ ಪ್ರತಿಪಾದಿಸಿದ್ದಾರೆ. ‘ಯತ್ಯೋಭ್ಯುದಯಃ ನಿಶ್ಶ್ರೇಯಸಃ ಸಿದ್ದಿಃ ಸಃ ಧರ್ಮಃ’ ಯಾವುದರಿಂದ ಮಾನವನ ಅಭ್ಯುದಯವಾಗುವುದೋ, ಯಾವುದರಿಂದ ಆತನಿಗೆ ಮುಕ್ತಿ ಲಭಿಸುವುದೋ ಅದುವೇ ಧರ್ಮ ಎಂದಿದ್ದಾರೆ. ವಿತಂಡವಾದಕ್ಕೆ ಎಡೆ ಮಾಡಿಕೊಡುವುದು ಸೂಕ್ತವಲ್ಲ. ಯೋಗ ವಿಚಾರವನ್ನು ಅನುಸರಿಸುವುದರಿಂದ ಅವರನ್ನು ದೇಶ ಅನುಸರಿಸುತ್ತದೆ. ಮೂಢನಂಬಿಕೆ ಮತ್ತು ಕಂದಾಚಾರಗಳು ಸನಾತನ ಧರ್ಮದ ಗುರಿಯಲ್ಲ ಎಂದು ತಿಳಿಸಿದ್ದಾರೆ.