ಸನಾತನ ಧರ್ಮ ನಾಶ ಅಸಾಧ್ಯ

10 YLP 1
Published on

ಯಲ್ಲಾಪುರ: ಸನಾತನ ಎಂದರೆ ಆರಂಭವೂ ಇಲ್ಲದ, ಅಂತ್ಯವೂ ಇಲ್ಲದ ನಿತ್ಯ ನೂತನ. ಇದನ್ನು ನಾಶ ಮಾಡುತ್ತೇನೆಂದರೆ ಅದು ಬಾಲಿಶ ಮಾತು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಶಾರದಾಂಬಾ ದೇವಸ್ಥಾನಕ್ಕೆ ಸೋಮವಾರ ಆಗಮಿಸಿದ್ದ ‘ಶೌರ್ಯ ಜಾಗರಣ ರಥ ಯಾತ್ರೆ’ಯ ರಥಕ್ಕೆ ಪೂಜೆ ಸಲ್ಲಿಸಿ, ನಂತರ ಆಯೋಜಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಅಯೋಧ್ಯೆಯಲ್ಲಿ ರಾಮಮಂದಿರದ ಕನಸು ನನಸಾಗುವ ಕ್ಷಣ ಬರುತ್ತಿದೆ. ಬಂಧನದಲ್ಲಿದ್ದ, ಮುಳ್ಳು ಬೇಲಿಗಳ ನಡುವೆ ಭದ್ರ ರಕ್ಷಣೆಯಲ್ಲಿದ್ದ ರಾಮನನ್ನು ನೋಡಿದ್ದೇವು. ಇದೀಗ ಭವ್ಯವಾದ ನೆಲೆಯಲ್ಲಿ ಸ್ವತಂತ್ರನಾಗಿ ಪ್ರತಿಷ್ಠಾಪಿಸಲ್ಪಡುವ ಶ್ರೀರಾಮನ ವಿಗ್ರಹವನ್ನು ನೆನಪು ಮಾಡಿಕೊಳ್ಳುವುದೇ ಆನಂದದ ಕ್ಷಣ. ಹಿಂದು ಧರ್ಮದಿಂದ ಇನ್ನಷ್ಟು ಹೆಚ್ಚು ಯುವಕರು, ಸೈನಿಕರಾಗಿ, ಪೊಲೀಸರಾಗಿ ದೇಶ, ಧರ್ಮದ ರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ವಿಶ್ವ ಹಿಂದು ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಮಾತನಾಡಿ, ವಿರೋಧಿಗಳ ದಾಳಿಗೆ ಯಾವಾಗ ಹಿಂದು ಧರ್ಮ ಎದ್ದು ನಿಂತಿದೆಯೋ ಆಗೆಲ್ಲ ಸನಾತನ ಧರ್ಮಕ್ಕೆ ಜಯ ಸಿಕ್ಕಿದೆ. ಅನೇಕ ದಾಳಿಗಳ ಹೊರತಾಗಿಯೂ ಪರಮ ವೈಭವದ ಸ್ಥಿತಿಗೆ ಹೆಜ್ಜೆ ಹಾಕುತ್ತಿದೆ ಎಂದರು.

ಶ್ರೀರಾಮ ಮೆಡಿಕಲ್ಸ್ ಮಾಲೀಕ ದಿಲೀಪ ಭಟ್ಟ, ರಥ ಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ, ವಿ.ಹಿಂ.ಪ ತಾಲೂಕು ಕಾರ್ಯದರ್ಶಿ ಅನಂತ ಗಾಂವ್ಕರ, ಗಿರೀಶ ಭಾಗ್ವತ ಇದ್ದರು.

ಸುಜನ ದುರಂಧರ ದೇಶ ಭಕ್ತಿ ಗೀತೆ ಹಾಡಿದರು. ನರಸಿಂಹ ಭಟ್ಟ ವೇದಘೋಷಗೈದರು. ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್. ಭಟ್ಟ ಏಕಾನ, ರಾಮು ನಾಯ್ಕ, ವಿ.ಹಿಂ.ಪ. ತಾಲೂಕು ಅಧ್ಯಕ್ಷ ನಾರಾಯಣ ನಾಯಕ ನಿರ್ವಹಿಸಿದರು. ನಂತರ ಪಟ್ಟಣದಲ್ಲಿ ನಡೆದ ಶೌರ್ಯ ರಥ ಯಾತ್ರೆಯ ಮೆರವಣಿಗೆಯಲ್ಲಿ ಮಹಿಳಾ ಭಜನಾ ತಂಡಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net