ಸನಾತನ, ಸಂವಿಧಾನ ಒಟ್ಟಾಗಿ ಹೋಗಲು ಸಾಧ್ಯವಿಲ್ಲ: ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ

11
Published on

ಮೈಸೂರು: ದೇಶದಲ್ಲಿ ಸನಾತನ ಮತ್ತು ಸಂವಿಧಾನ ಒಟ್ಟಾಗಿ ಹೋಗಲು ಸಾಧ್ಯವಿಲ್ಲ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಸಂಶೋಧನಾ ವಿದ್ಯಾರ್ಥಿ ವೇದಿಕೆಯಿಂದ ಶನಿವಾರ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ‘ಅಂಬೇಡ್ಕರ್ ಚಿಂತನೆ: ಸಮಕಾಲೀನ ಸ್ಪಂದನೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಶೋಷಣೆ, ಮೇಲು ಕೀಳು, ಜಾತಿ ವ್ಯವಸ್ಥೆ ತೊಡೆದು ಹಾಕುವ ಸಲುವಾಗಿ ಹೋರಾಟ ಪ್ರಾರಂಭವಾಯಿತು. ಸ್ವಾತಂತ್ರ್ಯ ಹೋರಾಟದ ಜತೆಯಲ್ಲಿ ಸಾಮಾಜಿಕ ಸ್ವಾತಂತ್ರ್ಯ ಹೋರಾಟವೂ ಆರಂಭವಾಯಿತು. ಇದಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ. ಹಾಗಾಗಿ ದೇಶದಲ್ಲಿ ಸನಾತನ ಮತ್ತು ಸಂವಿಧಾನ ಒಟ್ಟಾಗಿ ಹೋಗಲು ಸಾಧ್ಯವಿಲ್ಲದಂತ ಸ್ಥಿತಿ ಇದೆ ಎಂದು ಹೇಳಿದರು.
ಜಾತಿ ವ್ಯವಸ್ಥೆಗೆ ಕಾನೂನಿನಲ್ಲಿ ಮಾನ್ಯತೆ ಇರಬಾರದು. ಶ್ರಮ ವಿಭಜನೆಯಲ್ಲಿ ಮೇಲೂ ಕೀಳು ಇರಬಾರದು. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ಸೋದರತೆಯನ್ನು ಅಂಬೇಡ್ಕರ್ ಬಯಸಿದ್ದರು ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಸಂವಿಧಾನ ಬದಲಾವಣೆ ಮಾಡಲು ಬಲಪಂಥೀಯರ ಹುನ್ನಾರ ನಡೆಯುತ್ತಿವೆ. ಇದಕ್ಕಾಗಿ ನಾಲ್ಕು ನೂರು ಸ್ಥಾನ ಕೊಡಿ ಎಂದು ಹೇಳುತ್ತಿದ್ದಾರೆ. ಯುವಕರ ಮನಸ್ಸನ್ನು ಗೆದ್ದು, ಮನುಸ್ಮತಿ ಜಾರಿ ಮಾಡಲು ಹೊರಟಿದ್ದರು. ಆದರೆ ಭಾರತದ ಜನರು ನಾವು ಇದರ ಪರವಾಗಿಲ್ಲ ಎಂದು ಚುನಾವಣೆಯಲ್ಲಿ ಉತ್ತರಿಸಿದ್ದಾರೆ ಎಂದರು.
ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನಾಗಿ ಘೋಷಣೆ ಮಾಡಿರುವುದು ನಮ್ಮೇಲ್ಲರ ಭಾಗ್ಯವೇ ಸರಿ. ಇದು ಬೇರೆ ಸರ್ಕಾರ ಬಂದಿದ್ದರೂ ಮಾಡಲು ಸಾಧ್ಯವಾಗುತ್ತಿತ್ತೋ ಗೊತ್ತಿಲ್ಲ ಎಂದರು.
ಅಂಬೇಡ್ಕರ್ ಶೋಷಣೆ ವಿರುದ್ಧ ಜ್ಞಾನದ ಮಾರ್ಗದ ಕ್ರಾಂತಿ ಹರಿಸಿ ಸಮಾನತೆ ಸಾಧಿಸಿದರು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು. ಎಲ್ಲರಿಗೂ ಸ್ಥಾನಮಾನ, ಸಮಾನತೆ ದೊರಕಬೇಕು ಎಂಬುದು ಅವರ ಆಶಯವಾಗಿತ್ತು. ಶೋಷಣೆ ವಿರುದ್ಧ ಮೊಳಗಿದ ದನಿ ಎಂದರೆ ಅದು ಅಂಬೇಡ್ಕರ್ ಮಾತ್ರ ಎಂದು ಬಣ್ಣಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ, ಸ್ವಾತಂತ್ರ್ಯಕ್ಕೆ ಹೋರಾಡಿದ ಗಾಂಧೀಜಿ, ದೇಶಕ್ಕೆ ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಇವರುಗಳು ವಿಶ್ವಗುರುವಾಗಬಲ್ಲರೇ ಹೊರತು, ಮೋದಿ ವಿಶ್ವಗುರುವಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಜನರನ್ನು ಭಾವನಾತ್ಮಕವಾಗಿ ಸೆಳೆದು ಮತ ಬ್ಯಾಂಕ್ ಅಗಿ ಪರಿವರ್ತನೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಪ್ರಯತ್ನಗಳು ಬಹಳ ಕಾಲ ನಡೆಯುವುದಿಲ್ಲ ಎನ್ನುವುದು ಈ ಚುನಾವಣೆಯಲ್ಲಿ ಸಾಬೀತಾಗಿದೆ. ಹೀಗಾಗಿ ಕಳೆದ 10 ವರ್ಷದಲ್ಲಿ ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಿದೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ.ಕವಿತಾ ರೈ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net