ಸಣಾಪುರ ವಿತರಣಾ ನಾಲೆ ಹೂಳು ತೆಗೆಸಿದ ರೈತರು

Kampli Canal Clean
ಕಂಪ್ಲಿ ತಾಲೂಕಿನ ಎಲ್‌ಎಲ್‌ಸಿಯ ಎಸ್1 ವಿತರಣಾ ನಾಲೆಯ ದಡದಲ್ಲಿ ಬೆಳೆದ ಗಿಡಗಂಟಿಗಳನ್ನು ಹಿಟಾಚಿಯಿಂದ ತೆರವು ಮಾಡುತ್ತಿರುವುದು.
Published on

ಕಂಪ್ಲಿ: ದೇವಸಮದ್ರ ಗ್ರಾಮ ಸಮೀಪದ ಎಲ್‌ಎಲ್‌ಸಿಯ ಸಣಾಪುರ(ಎಸ್ 1)ವಿತರಣಾ ನಾಲೆಯಲ್ಲಿ ತುಂಬಿದ್ದ ಹೂಳು ಮತ್ತು ಗಿಡಗಂಟಿಯನ್ನು ಶುಕ್ರವಾರ ರೈತರೇ ಸ್ವಂತ ಖರ್ಚಿನಲ್ಲಿ ತೆರವು ಮಾಡಿಸಿದರು.

ರೈತ ಚಿಗುರುಪಾಟಿ ಸುರೇಂದ್ರ ಮಾತನಾಡಿ, ಸಣಾಪುರ ವಿತರಣಾ ನಾಲೆ ಸುಮಾರು 16 ಕಿಮೀ ಉದ್ದವಿದ್ದು 57 ಕ್ಯೂಸೆಕ್ ಇಂಡೆಂಟ್ ನೀರು ಹರಿಯಬೇಕು. ಎರಡು ಸಾವಿರಕ್ಕೂ ಹೆಚ್ಚು ಕೃಷಿಭೂಮಿಗೆ ನೀರೊದಗಿಸುತ್ತದೆ. ವಿತರಣಾ ನಾಲೆಯುದ್ದಕ್ಕೂ ಹೂಳು ತುಂಬಿ, ಜಂಗಲ್ ಬೆಳೆದಿದೆ. ಇದರಿಂದ ವಿತರಣಾ ನಾಲೆಯಲ್ಲಿ ನೀರು ಹರಿಯದೆ ಕೃಷಿ ಭೂಮಿಗೆ ತಲುಪುತ್ತಿಲ್ಲ. ಜಂಗಲ್ ಕಟಿಂಗ್, ಹೂಳೆತ್ತಿಸುವಂತೆ ನೀರಾವರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ನಮ್ಮಲ್ಲಿ ಅನುದಾನವಿಲ್ಲವೆಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರೇ ವಂತಿಗೆ ಹಾಕಿಕೊಂಡು 50 ಸಾವಿರ ರೂ. ವೆಚ್ಚದಲ್ಲಿ ಒಂದು ಕಿಮೀ ನಷ್ಟು ಜಂಗಲ್ ಕಟಿಂಗ್, ಹೂಳೆತ್ತುವ ಕಾಮಗಾರಿ ಮಾಡಿಸುತ್ತಿದ್ದೇವೆ. ರೈತರ ಒಳಿತಿಗಾಗಿ ಜನಪ್ರತಿನಿಧಿಗಳು, ನೀರಾವರಿ ಇಲಾಖಾಧಿಕಾರಿಗಳು ಎಚ್ಚೆತ್ತು ಜಂಗಲ್ ಕಟಿಂಗ್ ಮಾಡಿಸಿ, ಹೂಳೆತ್ತಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತರಾದ ಡಿ.ಕೃಷ್ಣಂರಾಜು, ಗಂಗಣ್ಣ, ವೆಂಕಟನಾಯ್ಡು, ರಂಗಯ್ಯ, ಪುಲ್ಲಯ್ಯ, ಸಿ.ನರಸಿಂಹಲು, ಹರಿಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net