

ಉಡುಪಿ: ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿರುವುದಲ್ಲದೆ, ಪ್ರತಿ ಪ್ರಜೆಯ ಕರ್ತವ್ಯವನ್ನೂ ತಿಳಿಸುತ್ತದೆ. ಹೀಗಾಗಿ ಶಾಲಾ&ಕಾಲೇಜು ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆ ಓದುವ ಮೂಲಕ ನಮಗಿರುವ ಹಕ್ಕು&ಬಾಧ್ಯತೆ ಅರಿತುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಕರೆ ನೀಡಿದರು.
ಉಡುಪಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಅಜ್ಜರಕಾಡು ಮಹಾತ್ಮ ಗಾಂದಿ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೊಡುಗೆ ನೀಡಿ: ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಇಂದಿನ ಯುವ ಸಮುದಾಯ ದಾರಿ ತಪ್ಪಿ ನಡೆಯತೊಡಗಿದ್ದಾರೆ. ಗಾಂಜಾ, ಚರಸ್ನಂತಹ ಮಾದಕ ವ್ಯಸನಗಳಿಗೆ ತುತ್ತಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಯುವ ಸಮುದಾಯವೇ ಹೆಚ್ಚು ಇರುವುದು ನಿಜಕ್ಕೂ ಆತಂಕದ ಸಂಗತಿ. ಮಕ್ಕಳು ಸುವಿಚಾರಗಳನ್ನು ಅಳವಡಿಸಿಕೊಂಡು ದೇಶಕ್ಕಾಗಿ ತ್ಯಾಗ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ಕುಮಾರ್ ಕೆ., ಎಎಸ್ಪಿ ಸಿದ್ಧಲಿಂಗಪ್ಪ, ನಗರಸಭಾ ಆಯುಕ್ತ ರಾಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಾಡ್ಲೂರು, ನಗರಸಭಾ ಸದಸ್ಯರಾದ ಪ್ರಭಾಕರ್, ಜಯಂತಿ ಪೂಜಾರಿ, ಹರೀಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಇತರರಿದ್ದರು.
ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.