

ಮಡಿಕೇರಿ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಪೊಲೀಸ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ ಹೀಗೆ ವಿವಿಧ ಇಲಾಖೆಗಳ ಸಹಕಾರದಲ್ಲಿ ನಗರದ ಸಂತ ಮೈಕಲರ ಶಾಲೆ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ‘ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳ ಶಿಕ್ಷಣದ ಜೊತೆಗೆ ರಕ್ಷಣೆ ಕುರಿತು ಸಂವಾದ’ ಕಾರ್ಯಕ್ರಮವು ಮಂಗಳವಾರ ನಡೆಯಿತು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕÀ ನಟರಾಜ, ಐಟಿಡಿಪಿ ಇಲಾಖೆಯ ಅಧಿಕಾರಿ ಎಸ್.ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಸೌಮ್ಯ ಪೊನ್ನಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ವ್ಯವಸ್ಥಾಪಕÀ ಶಿವಶಂಕರ, ಗುರುರಾಜ್ ಇತರರು ಪಾಲ್ಗೊಂಡಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ನಗರದ ಸರ್ಕಾರಿ ಪ್ರೌಢಶಾಲೆ, ಸಂತ ಮೈಕಲ್, ಸಂತ ಜೋಸೆಫ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಕೇಂದ್ರೀಯ ವಿದ್ಯಾಲಯ, ಕೊಡಗು ವಿದ್ಯಾಲಯ ಸೇರಿದಂತೆ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು.
ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿ ಜಾರಿ, ಬಾಲ್ಯ ವಿವಾಹ ತಡೆ, ಹೆಣ್ಣು ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ, ಮುಷ್ಕರ/ಪ್ರತಿಭಟನಾ ಸಂದರ್ಭದಲ್ಲಿ ಸುಗಮ ಸಾರಿಗೆ ಸಂಚಾರಕ್ಕೆ ಅಡಚಣೆ ಉಂಟಾಗದAತೆ ನೋಡಿಕೊಳ್ಳುವುದು. ಆನ್‌ಲೈನ್ ಮೋಸ/ ವಂಚನೆಗೆ ತುತ್ತಾಗದಂತೆ ಗಮನಹರಿಸುವುದು. ಎಲ್ಲಾ ಹೆಣ್ಣು ಮಕ್ಕಳಿಗೆ ವಸತಿ ಶಾಲೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು... ಹೀಗೆ ಹಲವು ವಿಚಾರಗಳನ್ನು ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಂವಾದದಲ್ಲಿ ಪ್ರಶ್ನೆಗಳನ್ನು ಕೇಳಿದರು.
ಈ ಬಗ್ಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ಸರ್ಕಾರಿ ಸಂಸ್ಥೆಗಳಲ್ಲಿ ಪದವಿ, ಸ್ನಾತಕೋತ್ತರ ಪದವಿವರೆಗೂ ಉಚಿತ ಶಿಕ್ಷಣವಿದ್ದು, ಅದನ್ನು ಬಳಸಿಕೊಳ್ಳುವಂತಾಗಬೇಕು ಎಂದು ಹೇಳಿದ ವೆಂಕಟೇಶ್, ಆನ್‌ಲೈನ್ ಮೋಸಕ್ಕೆ ತುತ್ತಾಗಬಾರದು. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದೆ ತಮ್ಮ ಸುರಕ್ಷತೆಗೆ ಗಮನಹರಿಸುವುದು ಅತ್ಯಗತ್ಯ. ಮಕ್ಕಳು ದೇವರಿಗೆ ಸಮಾನ, ಆದ್ದರಿಂದ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್‌ಪಿ ಮಹೇಶ್ ಕುಮಾರ್ ಮೊಬೈಲ್ ಬಳಕೆಯಿಂದ ಒಳಿತು ಕೆಡುಕು ಎರಡೂ ಇದ್ದು, ಈ ಬಗ್ಗೆ ಎಚ್ಚರ ವಹಿಸಬೇಕು. ಆದರೂ ಮೋಸ, ವಂಚನೆಗೆ ತುತ್ತಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.