

ಶಿವರಾಜ ಎಂ. ಬೆಂಗಳೂರು
ಬಯಲು ಶೌಚಗೃಹಮುಕ್ತ ಜಿಲ್ಲೆ ನಿರ್ಮಾಣದ ಮೂಲಕ ಪ್ರತಿ ಮನೆಯಲ್ಲೂ ಶೌಚಗೃಹ ನಿರ್ಮಾಣದಲ್ಲಿ ಯಶ ಕಂಡಿರುವ ಜಿಲ್ಲಾ ಪಂಚಾಯಿತಿ ಈಗ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಸಮುದಾಯ ಶೌಚಗೃಹ ನಿರ್ಮಾಣದ ಧ್ಯೇಯದೊಂದಿಗೆ ಕಾಮಗಾರಿ ಆರಂಭಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಶೌಚಗೃಹಗಳು ಬೆರಳೆಣಿಕೆಷ್ಟಿವೆ. ಇರುವ ಶೌಚಗೃಹಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ಜಿಲ್ಲೆಯ 105 ಪಂಚಾಯಿತಿ ವ್ಯಾಪ್ತಿಯಲ್ಲೂ ತಲಾ ಒಂದರಂತೆ ಶೌಚಗೃಹ ನಿರ್ಮಾಣದತ್ತ ಕಾರ್ಯತತ್ಪರವಾಗಿದೆ.
ನಿರ್ಮಾಣ ಹಂತದಲ್ಲಿ 93 ಶೌಚಗೃಹ: ಈಗಾಗಲೇ ಜಿಲ್ಲೆಯಾದ್ಯಂತ ಆಯ್ದ ಪಂಚಾಯಿತಿ ವ್ಯಾಪ್ತಿಯಲ್ಲಿ 93 ಸಮುದಾಯ ಶೌಚಗೃಹ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು ತಲಾ 2 ಲಕ್ಷ ರೂ. ವೆಚ್ಚ ವಿನಿಯೋಗಕ್ಕೆ ಅನುಮೋದನೆ ದೊರೆತಿದೆ. ಇದರಲ್ಲಿ ಸರ್ಕಾರದಿಂದ 1.80 ಲಕ್ಷ ರೂ. ಅನುದಾನವಿರಲಿದ್ದು, ಉಳಿದ 20 ಸಾವಿರ ರೂ. ಆಯಾ ಪಂಚಾಯಿತಿ ಭರಿಸಲಿದೆ.
ಪೇ ಆ್ಯಂಡ್ ಯೂಸ್: ಸಮುದಾಯ ಶೌಚಗೃಹ ನಿರ್ಮಾಣದಷ್ಟೇ ಅದರ ನಿರ್ವಹಣೆಯೂ ಸವಾಲಾಗಿರುವುದರಿಂದ ಹಣ ಪಾವತಿಸಿ ಶೌಚಗೃಹ ಉಪಯೋಗಿಸುವ ಯೋಜನೆ ಬಗ್ಗೆ ಚಿಂತಿಸಲಾಗಿದೆ. ಆದರೆ ಇದು ಕಡ್ಡಾಯವಲ್ಲ. ಆಯಾ ಪಂಚಾಯಿತಿ ನಿರ್ವಹಣೆ ಹೊಣೆ ಹೊರುವುದರಿಂದ ಹಣ ವಸೂಲಿ ಆಯಾ ಪಂಚಾಯಿತಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರು ಕಡ್ಡಾಯ: ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಗೃಹ ನಿರ್ಮಾಣ ಮಾಡಲು ಅಲ್ಲಿನ ನೀರಿನ ಲಭ್ಯತೆ ಅವಲಂಬಿತವಾಗಿದೆ. ಶೌಚಗೃಹಕ್ಕೆ 24*7 ನೀರಿನ ಲಭ್ಯತೆ ಇರಬೇಕು. ಪ್ರತಿ ಶೌಚಗೃಹ ಕಟ್ಟಡದಲ್ಲೂ ನೀರಿನ ಓವರ್‌ಹೆಡ್ ಟ್ಯಾಂಕ್ ಇರಲೇಬೇಕು. ಪಂಚಾಯಿತಿಯೇ ನೀರು ಪೂರೈಕೆ ಜವಾಬ್ದಾರಿ ಹೊರಬೇಕು. ನೀರಿನ ಸಮಸ್ಯೆ ಇರುವ ಸ್ಥಳಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಅನುಮೋದನೆ ದೊರೆಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನಸಂದಣಿ ಜಾಗ ಆಯ್ಕೆ: ಸಾರ್ವಜನಿಕ ಶೌಚಗೃಹ ಯೋಜನೆ ಸದ್ಬಳಕೆಯಾಗಲು ಪ್ರಮುಖವಾಗಿ ಜನಸಂದಣಿ ಜಾಗವಿರಬೇಕು. ಇದಕ್ಕಾಗಿ ಬಸ್ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜತೆಗೆ ದೇವಸ್ಥಾನ, ಶಾಲಾ-ಕಾಲೇಜು, ಸಂತೆ ಮೈದಾನ ಮತ್ತಿತರ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮಾತ್ರ ಶೌಚಗೃಹ ನಿರ್ಮಾಣವಾಗಬೇಕು ಎಂಬ ಗುರಿ ಹೊಂದಲಾಗಿದೆ. ಅಲ್ಲದೆ ಗ್ರಾಮಾಂತರ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಆದ್ಯತೆ ಮೇರೆಗೆ ಶೌಚಗೃಹ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ.
ಸ್ಥಳೀಯರಿಗೆ ಉದ್ಯೋಗ: ಸಮುದಾಯ ಶೌಚಗೃಹ ನಿರ್ಮಾಣದಿಂದ ಸ್ಥಳೀಯರಿಗೂ ಉದ್ಯೋಗವಕಾಶ ಕಲ್ಪಿಸಿದಂತಾಗುತ್ತದೆ. ಪಾವತಿ ಮಾಡಿ ಬಳಸುವಂತ ಶೌಚಗೃಹದಲ್ಲಿ ನಿರ್ವಹಣೆ, ನೀರು ಪೂರೈಕೆ, ಸ್ವಚ್ಛತೆ ಮತ್ತಿತರ ಕೆಲಸಗಳಿಗೆ ಉದ್ಯೋಗ ನೀಡಿದಂತಾಗುತ್ತದೆ ಎಂಬುದೂ ಸಹ ಈ ಯೋಜನೆಯ ಉದ್ದೇಶಗಳಲ್ಲೊಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಯುಕ್ತರ ಮಾರ್ಗದರ್ಶನ: ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ವಿಶಾಲ್ ಮಾರ್ಗದರ್ಶನದಲ್ಲಿ ಸಮುದಾಯ ಶೌಚಗೃಹ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಶೌಚಗೃಹ ನಿರ್ಮಾಣವಷ್ಟೆ ಅಲ್ಲ ನಿರ್ವಹಣೆ ಜತೆಗೆ ಸದ್ಬಳಕೆಯಾಗಬೇಕು ಎಂಬ ನಿಟ್ಟಿನಲ್ಲಿ ಸಮರ್ಪಕ ಸ್ಥಳದಲ್ಲೇ ಕಟ್ಟಡ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಕಾಮಗಾರಿ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದ್ದಾರೆ.
ಪಿಡಿಒಗಳಿಗೆ ಆದೇಶ: ಪ್ರತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಗುರುತಿಸುವುದು, ಮೂಲಸೌಕರ್ಯ ಸೇರಿ ಗುಣಮಟ್ಟದ ಕಟ್ಟಡ ಕಾಮಗಾರಿ ಕಡೆಗೆ ಗಮನ ನೀಡುವಂತೆ ಸೂಚನೆ ರವಾನಿಸಲಾಗಿದೆ.
ಸ್ವಚ್ಛಭಾರತ ಅಭಿಯಾನ ಕೇವಲ ೋಷಣೆಗಷ್ಟೆ ಸೀಮಿತವಾಗಬಾರದು ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದು ಉದ್ದೇಶದೊಂದಿಗೆ ಸಮುದಾಯ ಶೌಚಗೃಹ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಈ ಯೋಜನೆ ಯಶಸ್ಸಿಗೆ ಸಾರ್ವಜನಿಕರು ಕೈಜೋಡಿಸಬೇಕು. ಎನ್.ಎಂ.ನಾಗರಾಜ್, ಜಿಪಂ ಸಿಇಒ